Friday, November 22, 2024
Google search engine
Homeಮುಖಪುಟಕಿಡಿಗೇಡಿಗಳ ಬಂಧಿಸಿ - ತುಮಕೂರಿನಲ್ಲಿ ಕುರುಬ ಸಮುದಾಯ ಪ್ರತಿಭಟನೆ

ಕಿಡಿಗೇಡಿಗಳ ಬಂಧಿಸಿ – ತುಮಕೂರಿನಲ್ಲಿ ಕುರುಬ ಸಮುದಾಯ ಪ್ರತಿಭಟನೆ

ಮಂಡ್ಯ ಜಿಲ್ಲೆ ಕೆರೆಗೋಡಿನ ಹನುಮಧ್ವಜ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಕುರುಬರ ಹಾಸ್ಟಲ್‌ಗೆ ಕಲ್ಲು ತೂರಾಟ ನಡೆಸಿ, ಹಾಸ್ಟಲ್ ಕಟ್ಟಡದಲ್ಲಿ ತೂಗು ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭಕ್ತ ಕನಕದಾಸರ ಭಾವಚಿತ್ರಗಳನ್ನು ಹರಿದು ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಕುರುಬರ ಸಂಘ, ಕನಕ ಯುವಸೇನೆ, ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕುರುಬ ಸಮುದಾಯದ ಮುಖಂಡರು, ಸರಕಾರ ಈ ಕೂಡಲೇ ಪ್ರತಿಭಟನೆಯ ವೇಳೆ ರೇಕಾರ್ಡ್ ಆಗಿರುವ ವಿಡಿಯೋ ಪೂಟೇಜ್ ಅನ್ನು ಆಧಾರವಾಗಿಟ್ಟುಕೊಂಡು ಪ್ಲಕ್ಸ್ ಹರಿದು ಹಾಕಿದ ಹಾಗೂ ಕುರುಬರ ಹಾಸ್ಟಲ್‌ಗೆ ಕಲ್ಲು ತೂರಾಟ ಮಾಡಿ ಅದರ ಕಿಟಿಕಿ ಬಾಗಿಲುಗಳ ಗಾಜುಗಳನ್ನು ಒಡೆದು ಹಾಕಿದ ವ್ಯಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಷಗೆ ಒಳಗಪಡಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್.ಟಿ.ಆರ್, ಹನುಮಧ್ವಜಕ್ಕೂ ಕುರುಬರಿಗೂ ಸಂಬಂಧವಿಲ್ಲ. ಹಾಗಿದ್ದರೂ ಪ್ರತಿಭಟನೆಯ ವೇಳೆ ಕುರುಬರ ಹಾಸ್ಟಲ್‌ನ್ನು ಕೇಂದ್ರೀಕರಿಸಿ ದಾಳಿ ನಡೆದಿರುವುದು ಖಂಡನೀಯ. ಕುರಿ ಕಾಯುವ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಎರಡು ಬಾರಿ ಮುಖ್ಯಮಂತ್ರಿಯಾಗಿರುವುದು ಇತರೆ ಸಮುದಾಯಗಳಿಗೆ ಸಹಿಸಲು ಸಾಧ್ಯವಿಲ್ಲದಂತಾಗಿ, ಪ್ರತಿಭಟನೆಯ ನೆಪದಲ್ಲಿ ಕುರುಬರನ್ನು ಹೆದರಿಸುವ ತಂತ್ರಕ್ಕೆ ಕೈಹಾಕಿದ್ದಾರೆ. ಕುರುಬರು ಸಹ ರಾಜ್ಯದಲ್ಲಿ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದ್ದು, ಇವರ ಈ ಧೋರಣೆ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.

ಕನಕ ಯುವಸೇನೆಯ ಜಿಲ್ಲಾಧ್ಯಕ್ಷ ಕೆಂಪರಾಜು ಮಾತನಾಡಿ, ಮಂಡ್ಯದ ಕೆರಗೋಡಿನಲ್ಲಿ ನಡೆದಿರುವುದು ಅತ್ಯಂತ ಹೇಯವಾದ ಕೃತ್ಯ. ನೇರವಾಗಿ ಸಿದ್ದರಾಮಯ್ಯನವರನ್ನು ಎದುರಿಸಲಾಗದೆ ಕಿಡಿಗೇಡಿಗಳು ಸಮುದಾಯದ ಮಕ್ಕಳು ಕಲಿಯುತ್ತಿರುವ ಹಾಸ್ಟಲ್ ಮೇಲೆ ಕಲ್ಲು ತೂರಾಟ ನಡೆಸಿ, ಬೆದರಿಕೆ ಒಡ್ಡುವ ತಂತ್ರಗಾರಿಕೆ ನಡೆಸಿದ್ದಾರೆ. ಈ ತಂತ್ರಗಳಿಗೆ, ಕುತಂತ್ರಗಳಿಗೆ ನಾವು ಹೆದರುವುದಿಲ್ಲ ಎಂದು ಹೇಳಿದರು.

ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ಹಾಗೆಂದ ಮಾತ್ರಕ್ಕೆ, ಇನ್ನೊಂದು ಸಮುದಾಯದ ಆಸ್ತಿಪಾಸಿ ಹಾನಿ ಮಾಡಿ, ಗಾಸಿಗೊಳಿಸುವ ಪ್ರಯತ್ನ ಸಲ್ಲದು, ನಾವು ಕೂಡ ಸಂಘಟಿತರಾಗಿದ್ದೇವೆ. ನಿಮಗೆ ಪ್ರತ್ಯುತ್ತರ ನೀಡುವಷ್ಟು ಶಕ್ತಿ ಎಂಬುದನ್ನು ನೀವುಗಳು ಅರ್ಥ ಮಾಡಿಕೊಳ್ಳಬೇಕು. ಇದು ಮುಂದುವರೆದರೆ ಅನಿವಾರ್ಯವಾಗಿ ನಾವು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿ, ಹಿಂದೂ ಹೆಸರಿನಲ್ಲಿ ಗಲಾಟೆ ನಡೆಸುತ್ತಿರುವ ನಾಯಕರು ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನಕದಾಸರು ಇಬ್ಬರು ಸಹ ಹಿಂದೂಗಳೇ ಆಗಿದ್ದಾರೆ. ಹನುಮಧ್ವಜ ಅದು ಸರಕಾರ ಮತ್ತು ನಿಮ್ಮ ನಡುವಿನ ಹೋರಾಟ. ಅದಕ್ಕೂ ಕುರುಬರ ಸಂಘಕ್ಕೂ ಸಂಬಂಧವಿಲ್ಲ. ಆದರೆ ಕುರುಬರನ್ನು ಗುರಿಯಾಗಿಸಿಕೊಂಡು ಹೀನ ಕೃತ್ಯಗಳನ್ನು ನಡೆಸಿದರೆ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಮಹಾಲಿಂಗಯ್ಯ, ವಕೀಲ ರಾಜೇಶ್, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಮಾಲೂರಪ್ಪ, ಸಿ.ಪುಟ್ಟರಾಜು, ಕುಮಾರಸ್ವಾಮಿ, ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಗೌರವಾಧ್ಯಕ್ಷ ರಾಜು, ಧರ್ಮರಾಜು, ಟಿ.ಈ.ರಘುರಾಮ್, ವಿರೂಪಾಕ್ಷ, ಟಿ.ಹೆಚ್.ಮಹದೇವ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular