ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಮೂರನೇ ದಿನವಾದ ಇಂದು(ಜ.3) ಬೆಂಗಳೂರಿನ 8ನೇ ಮೈಲ್ ನಲ್ಲಿ ಪಾದಯಾತ್ರೆಯಲ್ಲಿ ಹೋಗುತ್ತಿದ್ದವರನ್ನು ಸುತ್ತುವರೆದ ಪೊಲೀಸರು ಅನಾಮತ್ ಎಲ್ಲರನ್ನು ಬಸ್ ಗಳಿಗೆ ತುಂಬಿಕೊಂಡ ಸ್ವಾತಂತ್ರ್ಯ ಉದ್ಯಾನ ಕ್ಕೆ ಬಿಟ್ಟ ಘಟನೆ ನಡೆಯಿತು.
ಒಂದು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನಕ್ಕೆ ಪಾದಯಾತ್ರೆ ನಡೆಸುತ್ತಿದ್ದರು. ಅತಿಥಿ ಉಪನ್ಯಾಸಕರ ಪಾದಯಾತ್ರೆ 8ನೇ ಮೈಲಿವರೆಗೂ ಬರುವವರೆಗೂ ಸುಮ್ಮನಿದ್ದ ಪೊಲೀಸರು ಬೆಂಗಳೂರು ಪ್ರವೇಶಿಸುತ್ತಿದ್ದಂತೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಬಸ್ ಗಳಲ್ಲಿ ತುಂಬಿಕೊಂಡರು.
ಅತಿಥಿ ಉಪನ್ಯಾಸಕರನ್ನು ಪಾದಯಾತ್ರೆಯಲ್ಲಿ ತೆರಳಲು ಬಿಟ್ಟರೆ ಸಂಚಾರ ಅಸ್ತವ್ಯಸ್ತಗೊಳ್ಳಬಹುದು ಎಂದುದನ್ನು ಅರಿತ ಪೊಲೀಸರು ಅತಿಥಿ ಉಪನ್ಯಾಸಕರನ್ನು ಬಸ್ ಗಳಲ್ಲಿ ತುಂಬಿಕೊಂಡು ಸ್ವಾತಂತ್ರ್ಯ ಉದ್ಯಾನಕ್ಕೆ ಕರೆದೊಯ್ದರು. ಪೊಲೀಸರು ಬಸ್ ಗಳಲ್ಲಿ ತುಂಬಿಕೊಂಡು ಹೊರಡುತ್ತಿದ್ದಂತೆ ಅತಿಥಿ ಉಪನ್ಯಾಸಕರು ಕೆಲ ಕಾಲ ಗಲಿಬಿಲಿಗೊಂಡರು.
ಈ ಸಂಬಂಧ ದಿನ್ಯೂಸ್ ಕಿಟ್.ಇನ್ ಜೊತೆ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಶಿವಣ್ಣ ತಿಮ್ಲಾಪುರ, ಸೇವೆ ಕಾಯಂಗೊಳಿಸುವುದು ಮತ್ತು ಸೇವಾ ಭದ್ರತೆ ನೀಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ. ಸೇವೆ ಕಾಯಂಗೊಳಿಸಲು ಸಮಯ ತೆಗೆದುಕೊಳ್ಳಲಿ. ಆನಂತರ ಬೇಕಾದರೆ ಕಾಯಂಗೊಳಿಸಲಿ. ಇದನ್ನು ಈಡೇರಿಸುವವರೆಗೂ ಧರಣಿ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇಂದು ಮುಖ್ಯಮಂತ್ರಿಗಳ ಜೊತೆಗೆ ಸಭೆ ಇತ್ತು. ಮುಖ್ಯಮಂತ್ರಿಗಳು ದೆಹಲಿಗೆ ತೆರಳಿರುವುದರಿಂದ ಜನವರಿ 4ರಂದು ಸಭೆ ಕರೆದಿದ್ದಾರೆ. ಸಭೆಯಲ್ಲಿ ಬೇಡಿಕೆಗಳು ಈಡೇರಿಸಬೇಕೆಂದು ಕೇಳಿಕೊಳ್ಳುತ್ತೇವೆ. ನಮಗೆ ಈಗ 10 ತಿಂಗಳು ಮಾತ್ರ ಗೌರವಧನ ನೀಡುತ್ತಿದ್ದು, ಅದನ್ನು ವರ್ಷ ಪೂರ್ತಿ ಕೊಡಬೇಕು ಎಂದು ಆಗ್ರಹಿಸಿದರು.