ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಬೆಂಗಳೂರಿಗೆ ಕೈಗೊಂಡಿರುವ ಪಾದಯಾತ್ರೆ ಡಾಬಸ್‌ಪೇಟೆಯಿಂದ ಬೆಂಗಳೂರಿನತ್ತ ಮುಂದುವರೆದಿದೆ.
ಇಂದು ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಡಾಬಸ್‌ಪೇಟೆಯಿಂದ ಅತಿಥಿ ಉಪನ್ಯಾಸಕರು ಬೆಂಗಳೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅತಿಥಿ ಉಪನ್ಯಾಸಕರು ಪಯಣ ಬೆಳೆಸಿದ್ದು, ವಿಶೇಷಚೇತನರು ಹೆಜ್ಜೆ ಹಾಕುತ್ತಿರುವುದು ವಿಶೇಷವಾಗಿದೆ.
ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಮಾತನಾಡಿ, ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರು ದಿನಕ್ಕೊಂದು ಬೇಡಿಕೆ ಕೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ ಎಂದರು.
ನಾವು ದಿನಕ್ಕೊಂದು ಬೇಡಿಕೆ ಇಡುತ್ತಿಲ್ಲ. ಮೊದಲಿನಿಂದಲೂ ನಮ್ಮ ಬೇಡಿಕೆ ಒಂದೇ ಆಗಿದೆ. ಸೇವೆ ಖಾಯಮಾತಿ ಮಾಡಬೇಕು ಎಂಬುದು. ಈ ಬಗ್ಗೆ ಸಚಿವರು ಗಮನ ಹರಿಸಿ ಬಗ್ಗೆ ಕಣ್ತೆರೆದು ನೋಡಿ ಪರಿಹರಿಸುವ ಕೆಲಸ ಮಾಡಲಿ ಎಂದರು.
ಪಾದಯಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದಾರೆ ಎಂದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಪಾದಯಾತ್ರೆ ತಲುಪಿದ ಮೇಲೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.
ಪಾದಯಾತ್ರೆಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾ ಅಧ್ಯಕ್ಷ ಡಾ. ಧರ್ಮವೀರ,ಡಾ.ಶಿವಣ್ಣ ತಿಮ್ಲಾಪುರ, ಶಂಕರ್ ಹಾರೋಗೆರೆ ,ಡಾ. ಕುಮಾರ್, ಮಲ್ಲಿಕಾರ್ಜುನ್, ಹನುಮಂತರಾಯಪ್ಪ ಸೇರಿದಂತೆ ಸಾವಿರಾರು ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.