ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವ ಸುಧಾಕರ್ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಚ್.ಧರ್ಮವೀರ ಆರೋಪಿಸಿದ್ದಾರೆ.
ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಅಥವಾ ಸೇವ ಕಾಯಂಗೊಳಿಸುವುದನ್ನು ಬಿಟ್ಟು, ಸರ್ಕಾರ ಇಡಿ ಗಂಟು, ಪುಡಿಗೆಂಟು ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸುವ ದೃಷ್ಟಿಯಿಂದ ಕಣ್ಣೊರೆಸುವ ತಂತ್ರ ಮಾಡುತ್ತಿರುವುದು ಖಂಡಿಸಿ ಜನವರಿ 1 ರಂದು ಬೆಳಗ್ಗೆ 10-30ಕ್ಕೆ ಸಿದ್ದಗಂಗಾ ಮಠದಿಂದ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಆರಂವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ನಮ್ಮ ಒಂದೇ ಒಂದು ಬೇಡಿಕೆಯಾದ ಸೇವೆ ಕಾಯಂಗೊಳಿಸುವುದನ್ನು ಬಿಟ್ಟು ನಮಗೆ ಹಿಡಿಗಂಟು, ವೇತನ ಹೆಚ್ಚಳ, ಆರೋಗ್ಯ ವಿಮೆ ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಕುತಂತ್ರ ನಡೆಸಿದೆ. ಸೇವೆ ಕಾಯಂ ಆಗುವವರೆಗೂ ಪ್ರತಿಭಟನೆ ಧರಣಿ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪೂರ್ವ ನಿರ್ಧಾರದಂತೆ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ ಪಾದಯಾತ್ರೆಯನ್ನು ಜನವರಿ 1ರಂದು ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಎಲ್ಲಾ ಅತಿಥಿ ಉಪನ್ಯಾಸಕರು ಸಿದ್ದಗಂಗಾ ಮಠದಲ್ಲಿ ಸಮಾವೇಶಗೊಂಡು ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ನಂತರ ಆಮರಣಾಂತ ಉಪವಾಸ ಸತ್ಯಾಗ್ರಹ ಆಚರಿಸಲು, ಜಿಲ್ಲಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಜನವರಿ 1 ರಂದು ಬೆಳ್ಳಗೆ 10.30ಕ್ಕೆ ಸಿದ್ದಗಂಗಾ ಮಠದ ಮಠಾಧ್ಯಕ್ಷ ಸಿದ್ದಲಿಂಗೇಶ್ವರ ಸ್ವಾಮೀಜಿ ನಮ್ಮ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ವಿವಿಧ ಸಂಘಟನೆಗಳ ಹೋರಾಟಗಾರರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಜೊತೆಗೆ, ರಾಜ್ಯದ್ಯಂತ ಎಲ್ಲ ಜಿಲ್ಲೆಗಳಿಂದ ಸುಮಾರು 3 ಸಾವಿರ ಅತಿಥಿ ಉಪನ್ಯಾಸಕರು ಬರುವ ನಿರೀಕ್ಷೆಯಿದೆ ಎಂದರು.
ಬಸ್ಸು, ಟ್ರೈನ್, ಹಾಗೂ ವಿವಿಧ ವಾಹನಗಳ ಮೂಲಕ ಸಿದ್ದಗಂಗಾ ಮಠಕ್ಕೆ ಬಂದು ಸೇರಲಿದ್ದಾರೆ. ಅಲ್ಲಿಂದ ನಮ್ಮ ಪಾದಯಾತ್ರೆ ದಾವಸ್ ಪೇಟೆಯಲ್ಲಿ ಜ.1ರಂದು ರಾತ್ರಿ ತಂಗಲಿದೆ. ಜ.2ರಂದು ಪಾದಯಾತ್ರೆ ಮುಂದುವರೆಯಲಿದ್ದು ನೆಲಮಂಗಲದ ಸಿದ್ದಗಂಗಾ ಪದವಿ ಕಾಲೇಜಿನಲ್ಲಿ ವಾಸ್ತವ್ಯ ಹೂಡಲಾಗುವುದು, ಮೂರರಂದು ಬೆಂಗಳೂರು ನಗರವನ್ನು ಪ್ರವೇಶಿಸಿ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಮಾಡಲಿದೆ. ಜನವರಿ 4ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.