ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿಯು 34ನೇ ದಿನವು ಮುಂದುವರೆದಿದ್ದು, ಜನವರಿ 1 ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಪಾದಯಾತ್ರೆಗೆ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದ್ದು, ಪೊಲೀಸ್ ಇಲಾಖೆ ಅನುಮತಿ ಹಾಗೂ ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಸೇರಿದಂತೆ ವಿವಿಧ ರೀತಿಯ ಕಮಿಟಿಗಳನ್ನು ಮಾಡಿಕೊಂಡು ಜ.1 ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭವಾಗಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಾ. ಧರ್ಮವೀರ ತಿಳಿಸಿದ್ದಾರೆ.
ಪಾದಯಾತ್ರೆ ನಡೆಸಲು ಬೆಂಗಳೂರು ಪೊಲೀಸ್ ಮಹಾನಿರ್ದೇಶಕರಿಂದ ಅನುಮತಿ ಪಡೆದಿದ್ದು, ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ರಾಜ್ಯದಾದ್ಯಂತ ಸುಮಾರು 3 ಸಾವಿರ ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಡಾಬಸ್‌ಪೇಟೆ, ನೆಲಮಂಗಲ ಮೂಲಕ ಪಾದಯಾತ್ರೆ ಸಾಗಿ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶಗೊಳ್ಳಲಿದೆ. ಅಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಮೌನಾಚರಣೆ:
ಅನಾರೋಗ್ಯದಿಂದ ಕೆ.ಆರ್.ನಗರದ ಅತಿಥಿ ಉಪನ್ಯಾಸಕ ಎಂ.ಕೆ. ಪ್ರಕಾಶ್ ನಿಧನರಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಅತಿಥಿ ಉಪನ್ಯಾಸಕರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಿದರು.
ಇದೇ ವೇಳೆ ಮಾತನಾಡಿದ ಅತಿಥಿ ಉಪನ್ಯಾಸಕ ಡಾ. ಕುಮಾರ್, ಅತಿಥಿ ಉಪನ್ಯಾಸಕರ ಬದುಕಿಗೆ ಆಸರೆ ಇಲ್ಲವಾಗಿದೆ. ಇಂದು ನಿಧನರಾಗಿರುವ ಅತಿಥಿ ಉಪನ್ಯಾಸಕ ಪ್ರಕಾಶ್ ಕುಟುಂಬ ಬೀದಿ ಪಾಲಾಗಿದೆ. ನಾಳೆ ನಮ್ಮ ಬದುಕು ಮತ್ತು ಕುಟುಂಬಗಳ ಸ್ಥಿತಿಯೂ ಇದೇ ಆಗಲಿದೆ. ಸರ್ಕಾರ ಈ ಕೂಡಲೇ ನಮ್ಮ ಸೇವೆಯನ್ನು ಕಾಯಂಗೊಳಿಸಿ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾ ಕಾರ್ಯಾಧ್ಯಕ್ಷ ಡಾ ಶಿವಣ್ಣ ತಿಮ್ಲಾಪುರ್ ಮಾತನಾಡಿ, ಸರ್ಕಾರ ತಿಂಗಳು ಕಳೆದರೂ ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸಿದ್ದಗಂಗಾ ಮಠದಿಂದ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ್, ಶಂಕರ್ ಹಾರೋಗೆರೆ, ಕಾಂತರಾಜು, ಸುರೇಶ್, ಶಂಕರ್, ಗಿರಿಜಮ್ಮ, ಅನಿತಾ, ವಿನುತಾ, ಯಶಸ್ವಿನಿ, ತೋಂಟಾರಾಧ್ಯ, ದೀಪಕ್, ಗಿರೀಶ್, ಮಹೇಶ್, ಶಶಿಕುಮಾರ್ ಮೊದಲಾದವರು ಇದ್ದರು.