ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಹುಭಾಷಾ ನಟಿ ಲೀಲಾವತಿ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಕನ್ನಡ, ತೆಲುಗು ಮತ್ತು ತಮಿಳು ಭಾಷಾ ಚಿತ್ರಗಳಲ್ಲಿ ಉತ್ತಮವಾಗಿ ಅಭಿನಯಿಸಿ ಹೆಸರು ಗಳಿಸಿದ್ದರು. ಬಾಲ್ಯದಲ್ಲಿ ಇವರು ಹೆಸರು ಲೀಲಾ ಕಿರಣ್ ಎಂಬುದಾಗಿತ್ತು. ಚಿತ್ರರಂಗ ಪ್ರವೇಶಿಸಿದ ನಂತರ ಅವರಿಗೆ ಲೀಲಾವತಿ ಎಂದು ಮರುನಾಮಕರಣ ಮಾಡಲಾಯಿತು.
ಲೀಲಾವತಿ ಅವರು 600 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಪೈಕಿ 400 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಮನ್ನಣೆ ಗಳಿಸಿದ್ದರು. ಭಕ್ತಕುಂಬಾರ, ಮನ ಮೆಚ್ಚಿದ ಮಡದಿ, ಸಂತ ತುಕಾರಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಲೀಲಾವತಿ ಅವರಿಗೆ ಜೀವಮಾನ ಸಾಧನೆಗೆ ಡಾ.ರಾಜ್ ಕುಮಾರ್ ಪ್ರಶಸ್ತಿ ಲಭಿಸಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಲವು ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ.