ಕಲಬುರಗಿಯ ವಕೀಲ ಈರಣ್ಣಗೌಡ ಹತ್ಯೆ ಪ್ರಕರಣವನ್ನು ಖಂಡಿಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ತುಮಕೂರು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿಯುವ ಮೂಲಕ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.
ಈರಣ್ಣಗೌಡ ಪಾಟೀಲ ಅವರನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ನ್ಯಾಯಾಲಯಕ್ಕೆ ಹೋಗುವ ಸಂದರ್ಭದಲ್ಲಿ ಈರಣ್ಣಗೌಡರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಇದನ್ನು ನೋಡಿದರೆ ವಕೀಲರಿಗೆ ಸಂರಕ್ಷಣೆ ಇಲ್ಲವಾಗಿದೆ ಎಂದು ಆರೋಪಿಸಿದರು.
ತುಮಕೂರು ಜಿಲ್ಲಾ ವಕೀಲರ ಭವನದ ಮುಂದೆ ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದ ನೂರಾರು ವಕೀಲರು ಈರಣ್ಣಗೌಡ ಹತ್ಯೆಯಾಗಿರುವುದು ಆತಂಕವನ್ನು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಚಿಕ್ಕಮಗಳೂರಿನಲ್ಲಿ ಯುವ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಆ ಸುದ್ದಿ ವಕೀಲರ ಮನಸ್ಸಿನಿಂದ ಮಾಸುವ ಮುನ್ನವೇ ಕಲ್ಬುರ್ಗಿಯಲ್ಲಿ ವಕೀಲ ಈರಣ್ಣಗೌಡ ಪಾಟೀಲರ ಹತ್ಯೆ ನಡೆದಿದೆ. ರಾಜ್ಯದಲ್ಲಿ ವಕೀಲರಿಗೆ ರಕ್ಷಣೆ ಇಲ್ಲವಾಗಿದೆ ಎಂದು ವಕೀಲರು ಹೇಳಿದರು.
ರಾಜ್ಯಾದ್ಯಂತ ವಕೀಲರ ಮೆಲೆ ಹಲ್ಲೆ, ದೌರ್ಜನ್ಯ, ಕೊಲೆ, ಕಿರುಕುಳ ತೊಂದರೆ ನಿಡುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ. ವಕೀಲರ ಹಾಗು ವಕೀಲರ ಕುಟುಂಬದ ಸದಸ್ಯರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಆರೋಪಿಸಿದರು.
ವಕೀಲರ ರಕ್ಷಣಾ ಕಾಯ್ದೆ ತುಂಬಾ ಅಗತ್ಯವಿದೆ. ಆ ನಿಟ್ಟಿನಲ್ಲಿ ವಕೀಲರ ತಾಳ್ಮೆಗೆ ಒಂದು ಮಿತಿ ಇದೆ. ನಮ್ಮನ್ನಾಳುವ ಸರ್ಕಾರಗಳು ವಕೀಲರ ತಾಳ್ಮೆಯನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ಕೈ ಹಾಕದೆ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು. ಈರಣ್ಣಗೌಡ ಹತ್ಯೆಯಾಗಿರುವುದಕ್ಕೆ ನ್ಯಾಯ ಒದಗಿಸಬೇಕು. ಆರೋಪಿಗಳನ್ನು ಬಂಧಿಸಬೇಕು. ವಕೀಲರ ಸಂರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಟಿ.ಎನ್.ಗುರುರಾಜ್, ವಿ.ಆರ್.ವೆಂಕಟೇಶ್, ನವೀನ್ ನಾಯಕ್, ತುಮಕೂರು ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಖಜಾಂಚಿ ಭಾರತಿ, ರಾಮಾಂಜಿನಪ್ಪ, ಮತ್ತು ಪದಾಧಿಕಾರಿಗಳು, ವಕೀಲರಾದ ಹಿಮಾನಂದ್, ಆಡವೀಶಯ್ಯ, ಗುಪ್ತ, ನಟರಾಜ, ರಂಗರಾಜು, ಡಿ.ಶೀನಪ್ಪ, ಜಗದೀಶ್, ರೇಖಾ, ಪ್ರಸಾದ್, ನವೀನ್ ಕುಮಾರ್, ಸಿ.ಕೆ.ಮಹೇಂದ್ರ, ಈ.ಶಿವಣ್ಣ, ಹರೀಶ್ ಮೊದಲಾದವರು ಇದ್ದರು.