ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು, ಶಾಶ್ವತ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಐದನೇ ದಿನವೂ ಮುಂದುವರಿಯಿತು. ಅತಿಥಿ ಉಪನ್ಯಾಸಕರು ಕೈಗೆ ಕಪ್ಪು ಪಟ್ಟಿಧರಿಸಿ ಪ್ರತಿಭಟನೆ ನಡೆಸಿದರು.
ತುಮಕೂರಿನಲ್ಲಿಯೂ ಜಿಲ್ಲಾಧಿಕಾರಿಯ ಎದುರು ಅನಿತಷ್ಟಾವಧಿ ಧರಣಿ ಮುಂದುವರೆಸಿರುವ ಅತಿಥಿ ಉಪನ್ಯಾಸಕರು ತಮಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರ ಜಿಲ್ಲಾಧ್ಯಕ್ಷ ಡಾ.ಧರ್ಮವಿರ ಮಾತನಾಡಿ ಇಂದು ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ದೇವೆ, ನಮ್ಮ ಬೇಡಿಕೆಗಳನ್ನು ಇಬ್ಬರು ಸಚಿವರು, ಇಬ್ಬರು ಎಂಎಲ್‌ಸಿಗಳ ಗಮನಕ್ಕೆ ತರುತ್ತೇವೆ. ನಮ್ಮ ಬೇಡಿಕೆಗಳನ್ನು ಶೀಘ್ರ ಬಗೆಹರಿಸದಿದ್ದರೆ ಹೋರಾಟ ಉಗ್ರರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.
ಅತಿಥಿ ಉಪನ್ಯಾಸಕಿ ಡಾ.ಜಲಜಾಕ್ಷಿ ಮಾತನಾಡಿ, ರಾಜ್ಯ ಸರ್ಕಾರ ನಾಡಿನ ಜನತೆಗೆ ನೀಡಿರುವ ಭಾಗ್ಯಗಳಂತೆ ಅತಿಥಿ ಉಪನ್ಯಾಸಕರಿಗೂ ನೀಡಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಅತಿಥಿ ಉಪನ್ಯಾಸಕರಿಗೆ ಕಾಯಮಾತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಧರಣಿಯಲ್ಲಿ ಡಾ.ಕುಮಾರ್, ಗಂಗಾಧರ ಶಿರಾ, ಡಾ.ಶೇಖರ್, ಶಿವಣ್ಣ, ಡಾ. ಶ್ರೀನಿವಾಸ್, ಶಿವಣ್ಣ ತಿಮ್ಮಲಾಪುರ, ಮಲ್ಲಿಕಾರ್ಜುನ್, ಶಂಕರಪ್ಪ ಹಾರೋಗೆರೆ, ಅಂಬಿಕಾ, ಹರ್ಷಿತ, ಡಾ.ಕವಿತಾ, ಶಿವಯ್ಯ ,ಗಿರೀಶ್, ಸುರೇಶ್, ಅರುಣ್ ಕುಮಾರ್ ಕಾಂತರಾಜ್ ಸೇರಿ ನೂರಾರು ಅತಿಥಿ ಉಪನ್ಯಾಸಕರು ಇದ್ದರು.