ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ನವೆಂಬರ್ 19ರಂದು ನಡೆದ ಐಸಿಸಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳ ಹೀನಾಯ ಸೋಲು ಕಂಡು, ಆಸ್ಟ್ರೇಲಿಯಾ ಗೆದ್ದು ಬೀಗಿದೆ.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 240 ರನ್ ಗಳಿಸಿತು. 241 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ ಟ್ರಾವಿಸ್ ಹೆಡ್ ಶತಕ ಮತ್ತು ಲಬುಶೇನ್ ಅವರ ಅರ್ಧಶತಕದ ನೆರವಿನಿಂದ 6ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೇವಲ 47 ರನ್ ಗಳಿಗೆ ತನ್ನ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಆಸರೆಯಾಗಿ ನಿಂತರು. ಅವರಿಗೆ ಲಬುಶೇನ್ ಸಾಥ್ ನೀಡಿದರು. 120 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 15 ಬೌಂಡರಿ ನೆರವಿನಿಂದ ಹೆಡ್ 137 ರನ್ ಗಳಿಸಿ ಸಿರಾಜ್ ಬೌಲಿಂಗ್ ನಲ್ಲಿ ಅಂತಿಮ ಹಂತದಲ್ಲಿ ವಿಕೆಟ್ ಒಪ್ಪಿಸಿದರು.
ಭಾರತದ ಬೌಲರ್ ಗಳು ಉತ್ತಮವಾಗಿ ಬೌಲಿಂಗ್ ಮಾಡಿದರೂ ಆಸಿಸ್ ತಂಡದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ಹೀಗಾಗಿ ಆಸ್ಟ್ರೇಲಿಯಾ ತಂಡ 7 ವಿಕೆಟ್ ಗಳನ್ನು ಕೈಯಲ್ಲಿಟ್ಟುಕೊಂಡು ಗೆಲುವು ಸಾಧಿಸಿತು.
ಭಾರತ ತಂಡ ಫೈನಲ್ ನಲ್ಲಿ ಗೆದ್ದು ಬರುವಂತೆ ದೇಶಾದ್ಯಂತ ದೇವಸ್ಥಾನಗಳಲ್ಲಿ ಹೋಮ, ಹವನ, ಪೂಜೆ, ಪುನಸ್ಕಾರಗಳನ್ನು ಮಾಡಲಾಯಿತು. ಆದರೆ ಯಾವ ಪೂಜೆಯೂ ಫಲ ನೀಡಲಿಲ್ಲ.