ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಧ್ಯಕ್ಷರನ್ನೊಳಗೊಂಡಂತೆ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಲಾಗಿದೆ. ಈ ಮೂಲಕ ಸಿ.ಎಂ.ಇಬ್ರಾಹಿಂ ಅವರಿಗೆ ಪಕ್ಷದ ವರಿಷ್ಠರು ಶಾಕ್ ನೀಡಿದ್ದು, ಅವರು ರಾಜ್ಯಾಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ ಅಂದರೆ, ಆರ್ಟಿಕಲ್ XX (10) ಪ್ರಕಾರ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ವಿಸರ್ಜನೆ ಮಾಡಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.
ಸಿ.ಎಂ.ಇಬ್ರಾಹಿಂ ಆಕ್ರೋಶ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿ.ಎಂ. ಇಬ್ರಾಹಿಂ, ಹಿರಿಯ ವಯಸ್ಸಿನ ದೇವೇಗೌಡರು ಇಂತಹ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ವರಿಷ್ಠರು ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸುತ್ತೇನೆ. ಅಷ್ಟೇ ಅಲ್ಲ ಹಾಸನ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಈ ಸಂಬಂಧ ಸಭೆಗಳನ್ನು ನಡೆಸುತ್ತೇನೆ ಎಂದು ಹೇಳಿದ್ದಾರೆ.
ಕಾಲಾಯ ತಸ್ಮೈ ನಮಃ, ವಿನಾಶ ಕಾಲೇ ವಿಪರೀತ ಬುದ್ದಿ. ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.