Saturday, October 19, 2024
Google search engine
Homeಮುಖಪುಟಜಿ-20 ಶೃಂಗಸಭೆಯಲ್ಲಿ ಹಲವು ಒಪ್ಪಂದ - ಭಾರತೀಯ ಕೃಷಿಯ ಮೇಲೆ ಗಂಭೀರ ಪರಿಣಾಮ

ಜಿ-20 ಶೃಂಗಸಭೆಯಲ್ಲಿ ಹಲವು ಒಪ್ಪಂದ – ಭಾರತೀಯ ಕೃಷಿಯ ಮೇಲೆ ಗಂಭೀರ ಪರಿಣಾಮ

ಇತ್ತೀಚಗೆ ನವದೆಹಲಿಯಲ್ಲಿ ಮುಕ್ತಾಯಗೊಂಡ ಜಿ-20 ಶೃಂಗ ಸಭೆಯಲ್ಲಿ ಭಾರತದ ಕೃಷಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದರಲ್ಲಿ ಬೆರ್ಸ್ ಮತ್ತು ಮಾನ್ಸಂಟೋ ಕಂಪನಿಯೊಂದಿಗೆ ಇಂಡಿಯನ್ ಕೌನ್ಸಿಲ್ ಅಫ್ ಅಗ್ರಿಕಲ್ಚರ್ ರಿಸರ್ಚ್ಐ ಮಾಡಿಕೊಂಡಿರುವ ಒಪ್ಪಂದ ಭವಿಷ್ಯದಲ್ಲಿ ಭಾರತೀಯ ಕೃಷಿಕರ ಮೇಲಾಗುವ ಪರಿಣಾಮಗಳ ಕುರಿತು ಬಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ ಎಂದು ಗಾಂಧಿ ಸಹಜ ಬೇಸಾಯ ಆಶ್ರಮದ ಮುಖ್ಯಸ್ಥ ಸಿ.ಯತಿರಾಜ ಆತಂಕ ವ್ಯಕ್ತಪಡಿಸಿದ್ದಾರೆ.

ಬೆರ್ಸ್ ಮತ್ತು ಮಾನ್ಸೆಂಟೋ ಸಂಸ್ಥೆಗಳು, ಐಸಿಎಆರ್ ಸಂಸ್ಥೆಯೊಂದಿಗೆ ಸೇರಿ ದೇಶದ ಕೃಷಿಕರಿಗೆ ನೈಸರ್ಗಿಕ ಮತ್ತು ಪರಿಸರ ವಿಜ್ಞಾನಿಗಳೊಂದಿಗೆ ನಿಕಟ ಸಂಪರ್ಕ, ಪುನರುತ್ಪಾದಕ ಕೃಷಿ, ಸುಸ್ಥಿರ ಕೃಷಿ, ಹವಾಮಾನ ಸ್ಥಿತಿ ಸ್ಥಾಪಕತ್ವ,ಪೌಷ್ಠಿಕಾಂಶದ ಭದ್ರತೆ, ಸಣ್ಣ ರೈತರ ಸಬಲೀಕರಣ, ಕಾರ್ಬನ್ ಕ್ರೆಡಿಲ್ ಮಾರುಕಟ್ಟೆಗಳು, ಸಾಮರ್ಥ್ಯ ವೃದ್ದಿಯ ಜೊತೆಗೆ ರೂಪಾಂತರಿ ತಳಿಗಳ ಪರಿಚಯ ಕಡೆಗೂ ಗಮನಹರಿಸುವ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು, ಇದು ಭಾರತೀಯ ರೈತರಿಗೆ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂದು ಹೇಳಿದ್ದಾರೆ.

ಬೆರ್ಸ್ ಮತ್ತು ಮಾನ್ಸಂಟೋ ಕಂಪನಿಗಳು ಕುಲಾಂತರಿ ತಳಿ, ಕೀಟನಾಶಕ, ಕೃಷಿ ಸಂಬಂಧಿತ ರಸಾಯನಿಕಗಳ ತಯಾರಿಕೆಯಲ್ಲಿ ಸಾಕಷ್ಟು ಹೆಸರು ಮಾಡಿವೆ. ಇಂತಹ ಕಂಪನಿಗಳ ಜೊತೆ ಸಹಜ ಮತ್ತು ಸಾವಯವ ಕೃಷಿ ಪದ್ದತಿಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿರುವುದು ಕುರಿಗಳ ಹಿಂಡು ಕಾಯಲು ತೋಳವನ್ನು ನೇಮಿಸಿದಂತೆ ಎಂಬಂತಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಆಹಾರದ ಸ್ವಾವಲಂಬನೆ, ಹಸಿರುಕ್ರಾಂತಿ ಹೆಸರಿನಲ್ಲಿ ಈಗಾಗಲೇ ಅತಿಯಾದ ರಸಗೊಬ್ಬರ, ಕುಲಾಂತರಿ ತಳಿ ಬೀಜಗಳು, ರಸಾಯನಿಕಗಳನ್ನು ಬಳಕೆ ಮಾಡಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡಿರುವುದಲ್ಲದೆ, ಅಧುನಿಕ ಬೇಸಾಯ ಪದ್ದತಿಯ ಆಹಾರೋತ್ಪನ್ನಗಳನ್ನು ಸೇವಿಸಿದ ಮನುಷ್ಯನಲ್ಲಿಯೂ ನಾನಾ ರೀತಿ ರೋಗಗಳು ಕಾಣಿಸಿಕೊಳ್ಳುತಿದೆ. ಇದರಿಂದ ಹೊರಬರಲು ಭಾರತೀಯ ರೈತರು ಸಹಜ, ಸಾವಯವ ಮತ್ತು ಪಾರಂಪರಿಕ ಕೃಷಿ ಪದ್ದತಿಗಳ ಕಡೆಗೆ ನಿಧಾನವಾಗಿ ಮರಳುವ ಮನಸ್ಸು ಮಾಡುತ್ತಿರುವ ಕಾಲದಲ್ಲಿ, ಇಂತಹ ಒಪ್ಪಂದ ರೈತರನ್ನು ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದಂತಹ ಪರಿಸ್ಥಿತಿಯನ್ನು ತಂದೊಡ್ಡಲಿದೆ ಎಂದು ಹೇಳಿದ್ದಾರೆ.

ಒಂದೆಡೆ ಹವಾಮಾನ ವೈಪರಿತ್ಯದಿಂದ ಕೃಷಿ ಏರುಪೇರಾಗಿ,ಆಹಾರ ಧಾನ್ಯಗಳನ್ನು ಬೆಳೆದುಕೊಳ್ಳದ ಸ್ಥಿತಿಗೆ ರೈತ ತಲುಪಿದ್ದಾನೆ. ಒಂದು ವೇಳೆ ಒಳ್ಳೆಯ ಬೆಳೆ ಬಂದರೆ ಸಮರ್ಪಕ ಮಾರುಕಟ್ಟೆ, ಬೆಲೆಯಲ್ಲಿ ಸ್ಥಿರತೆ ಇಲ್ಲದೆ ನಷ್ಟಕ್ಕೆ ಒಳಗಾಗುತ್ತಿದ್ದಾನೆ. ಬಹುಬೆಳೆ ಪದ್ದತಿ ಮಾಯವಾಗಿ ಸಾಕಷ್ಟ ನಷ್ಟಕ್ಕೆ ಒಳಗಾಗುತ್ತಿದ್ದಾನೆ. ಎಣ್ಣೆ ಕಾಳುಗಳ ಉತ್ಪಾದನೆ ಕುಸಿದಿದೆ ಎಂಬ ನೆಪ ಮಾಡಿ, ರೂಪಾಂತರಿ ಸಾಸಿವೆಯನ್ನು ಪರಿಚಯಿಸಲು ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಕುಲಾಂತರಿ ತಳಿಗಳ ಬಳಕೆ ಮತ್ತು ಅವುಗಳಿಗೆ ಬರುವ ರೋಗಗಳನ್ನು ತಡೆಯಲು ಅತಿಯಾದ ರಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುವುದಲ್ಲದೆ, ಸಹಜ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡು ಭೂಮಿ ಬಂಜೆಯಾಗುವ ಕಾಲ ದೂರವಿಲ್ಲ ಎಂದು ತಿಳಿಸಿದ್ದಾರೆ.

ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ತುಮಕೂರಿನ ಗಾಂಧಿ ಸಹಜ ಬೇಸಾಯ ಆಶ್ರಮ ರೈತರಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 2ರ ಗಾಂಧೀ ಜಯಂತಿಯಂದು ಗಾಂಧೀ ಸಹಜ ಬೇಸಾಯ ಆಶ್ರಮ, ದೊಡ್ಡ ಹೊಸೂರಿನಿಂದ ತುಮಕೂರಿನ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ಪಾದಯಾತ್ರೆ ಜೊತೆಗೆ, ರೈತರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ ರೈತರಲ್ಲಿ ಸದರಿ ಒಪ್ಪಂದದಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಸಂವಾದ, ಚರ್ಚಾಗೋಷ್ಠಿಗಳನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಗಾಂಧಿ ಸಹಜ ಬೇಸಾಯ ಆಶ್ರಮದ ಸಿ.ಯತಿರಾಜು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular