Saturday, October 19, 2024
Google search engine
Homeಜಿಲ್ಲೆತುಮಕೂರು - ಸರ್ಕಾರಿ ಶಾಲೆಯ ಜಾಗ ಉಳಿಸುವಂತೆ ಅಂತರಸನಹಳ್ಳಿ ಗ್ರಾಮಸ್ಥರ ಆಗ್ರಹ

ತುಮಕೂರು – ಸರ್ಕಾರಿ ಶಾಲೆಯ ಜಾಗ ಉಳಿಸುವಂತೆ ಅಂತರಸನಹಳ್ಳಿ ಗ್ರಾಮಸ್ಥರ ಆಗ್ರಹ

ತುಮಕೂರಿನ ಅಂತರಸನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆಂದು ಮೀಸಲಿರಿಸ್ದಿದ್ದ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದು, ಸದರಿ ಖಾತೆಯನ್ನು ರದ್ದುಗೊಳಿಸಿ, ಲೋಕಾಯುಕ್ತ ನ್ಯಾಯಾಲಯದ ತೀರ್ಪಿನಂತೆ ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಆಗ್ರಹಿಸಿ ಆಂತರಸನಹಳ್ಳಿ ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು ಪೋಷಕರು ನಗರಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಅಂತರಸನಹಳ್ಳಿಯ ಗ್ರಾಮದ ಲಕ್ಷ್ಮೀ ನರಸಿಂಹ ಬಡಾವಣೆಯಲ್ಲಿ ಎರಡು ಸ್ವತ್ತುಗಳು ಮಿರ್ಜಾ ಇಸ್ಮಾಯಿಲ್ ಎಂಬುವವರಿಗೆ ಪರಭಾರೆಯಾಗಿರುತ್ತದೆ. ಆದರೆ ಸದರಿ ವ್ಯಕ್ತಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ್ದ ಸುಮಾರು 1.09 ಗುಂಟೆ ಜಾಗವನ್ನು ಅಕ್ರಮವಾಗಿ ತಮಗೆ ಸೇರಿದ್ದು ಎಂದು ಕಾಂಪೌಂಡ್ ಗೋಡೆ ನಿರ್ಮಿಸಿಕೊಂಡಿದ್ದಾರೆ ಇದನ್ನು ತೆರವುಗೊಳಿಸಿ ಶಾಲೆಗೆ ನೀಡಬೇಕೆಂದು ಆಗ್ರಹಿಸಿದರು.

ಈ ಬಗ್ಗೆ 2005 ರಿಂದ 2013ರವರೆಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಕೇಸು ನಡೆದು, ಸದರಿ ವ್ಯಕ್ತಿಗೂ, ಗ್ರಾಮಠಾಣಾ ಜಾಗಕ್ಕೂ ಸಂಬಂಧವಿಲ್ಲ. ಹಾಗಾಗಿ ಖಾತೆ ರದ್ದುಗೊಳಿಸುವಂತೆ ಆದೇಶ ನೀಡಿದ್ದು, ಈ ಆದೇಶದಂತೆ 2019 ಸೆಪ್ಟಂಬರ್ 10 ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಸದರಿ ಖಾತೆ ವಜಾ ಮಾಡಿ, ಶಾಲೆ ಮತ್ತು ದೇವಾಲಯದ ಹೆಸರಿಗೆ ಖಾತೆ ಮಾಡುವಂತೆ ಒಮ್ಮತದ ತೀರ್ಮಾನವಾಗಿದ್ದರೂ ಇದುವರೆಗೂ ಖಾತೆ ಮಾಡಿಲ್ಲ ಎಂದು ದೂರಿದರು.

ಅಂತರಸನಹಳ್ಳಿ ಸರ್ಕಾರಿ ಎಚ್.ಪಿ.ಎಸ್.ಶಾಲೆಯಲ್ಲಿ ಸುಮಾರು 260ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದು, ಜಾಗದ ಕೊರತೆಯಿಂದ ಮಕ್ಕಳು ಕಾರಿಡಾರ್‌ನಲ್ಲಿ ಕುಳಿತ ಪಾಠ, ಪ್ರವಚನ ಕೇಳಬೇಕಾದ ಸ್ಥಿತಿ ಇದೆ. ಶಾಲೆಗೆ ಅಗತ್ಯವಾದ ಕೊಠಡಿ ನಿರ್ಮಾಣ ಮಾಡಲು ಮುಂದಾದಾಗ, ಜಾಗದ ಬಗ್ಗೆ ತಕರಾರು ಎತ್ತುತಿದ್ದು, ಮಿರ್ಜಾ ಇಸ್ಮಾಯಿಲ್ ಅವರ ಜಾಗದ ಚೆಕ್‌ಬಂದಿಗೂ, ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ ಜಾಗದ ಚೆಕ್‌ಬಂದಿಗೂ ತಾಳೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸದರಿ ವಿಚಾರವಾಗಿ ಈ ಹಿಂದೆ ಪಾಲಿಕೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಭೂ ಬಾಲನ್ ಅವರು ಕಂದಾಯ ಇಲಾಖೆ ಮತ್ತು ಪಾಲಿಕೆಯ ಜಂಟಿ ಸರ್ವೆ ನಡೆಸಿ,ಸದರಿ ಜಾಗದಲ್ಲಿ ಮಿರ್ಜಾ ಇಸ್ಮಾಯಿಲ್ ಅವರು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು 2020ರ ಜೂನ್ 19 ರಂದು ಪಾಲಿಕೆಯ ವಾಹನಗಳನ್ನು ಬಳಸಿ ನೆಲಸಮ ಮಾಡಿ,ಸದರಿ ಖಾತೆಯನ್ನು ಬ್ಲಾಕ್‌ಲೀಸ್ಟ್ಗೆ ಹಾಕಿದ್ದರು. ಆದರೆ ಇಂದಿಗೂ ಸಹ ಮ್ಯಾನುಯಲ್ ಖಾತೆ ಬ್ಲಾಕ್‌ಲೀಸ್ಟ್ನಲ್ಲಿದ್ದರೆ, ಆನ್‌ಲೈನ್‌ನಲ್ಲಿ ಖಾತೆ ಓಪನ್ನಾಗಿದೆ. ಹಾಗಾಗಿ ಸದರಿ ಖಾತೆಯನ್ನು ರದ್ದು ಮಾಡಿ, ಶಾಲೆಗೆ ಅಗತ್ಯವಿರುವ 65/76 ಜಾಗವನ್ನು ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರು.

ಲೋಕಾಯುಕ್ತ ನ್ಯಾಯಾಲಯ ಮತ್ತು ನಗರಪಾಲಿಕೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಜಂಟಿ ಸರ್ವೆ ನಡೆಸಿ, ಮಿರ್ಜಾ ಇಸ್ಮಾಯಿಲ್ ಅವರು ಪಿಐಡಿ ನಂಬರ್ ಮತ್ತು ಖಾತೆಗಳಿಗೂ, ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ್ದ ಜಾಗಕ್ಕೂ ತಾಳೆಯಾಗುತ್ತಿಲ್ಲ ಎಂಬ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರ ವರದಿ ನಂತರ, ಖಾತೆ ರದ್ದು ಮಾಡುವ ಆದೇಶವಿದ್ದರೂ ಇದುವರೆಗೂ ಅಕ್ರಮವಾಗಿ ಖಾತೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಸರಕಾರದಿಂದ ಶಾಲೆ ನಿರ್ಮಾಣಕ್ಕೆ ಹಣ ಮಂಜೂರಾದರೂ ಭೂ ವ್ಯಾಜ್ಯದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಜಿಲ್ಲಾಡಳಿತ, ಪಾಲಿಕೆ, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular