ಲೋಕಸಭಾ ಚುನಾವಣೆಯಲ್ಲಿ ವರಿಷ್ಠರಿಗೆ ಕೊಟ್ಟಿರುವ ಮಾತಿನಂತೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ತಿಳಿಸಿದ್ದಾರೆ.
ತುಮಕೂರು ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಅಲ್ಪಸಂಖ್ಯಾತರ ಘಟಕದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸುವುದಾಗಿ ವರಿಷ್ಠರಿಗೆ ಮಾತು ಕೊಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಪ್ರತಿ ಗ್ರಾಮ ಪಂಚಾಯಿತಿಯ ಮನೆ ಮನೆಗೆ ಪಾದಯಾತ್ರೆಯ ಮೂಲಕ ತೆರಳಿ ಸರ್ಕಾರದ ಯೋಜನೆಗಳನ್ನು ಜನರ ಗಮನಕ್ಕೆ ತಂದು ಪಕ್ಷ ಸಂಘಟಿಸಲಾಗುವುದು ಎಂದು ಹೇಳಿದ್ದಾರೆ.
ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ, ಗ್ರಾಮ ಪಂಚಾಯಿತಿ ಮಟ್ಟದ ಪ್ರತಿ ಮನೆಮನೆಗೂ ಪಾದಯಾತ್ರೆ ಮೂಲಕ ತೆರಳಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಪ್ರೇರೆಪಿಸಿ, ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಲೋಕಸಭಾ ಸದಸ್ಯರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಷಣ್ಮುಖಪ್ಪ ಮಾತನಾಡಿ, ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗೆ ತಳಮಟ್ಟದಿಂದ ಪಕ್ಷವನ್ನ ಸಂಘಟಿಸಿ ಚುನಾವಣೆಗೆ ಯಾರೇ ನಿಂತರೂ ಜಾತ್ಯತೀತವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂಬ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ, ಎಲ್ಲರೂ ಪಕ್ಷದ ಸಿದ್ದಾಂತವನ್ನು ಒಪ್ಪಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಹೆಚ್ಚಿನ ಕಾಳಜಿ ವಹಿಸಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ, ಗ್ರಾಮಾಂತರ ಕ್ಷೇತ್ರದ 35 ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದಿಟ್ಟು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗುವುದು ಎಂದೂ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಸಿ.ಘಟಕದ ಜಿಲ್ಲಾ ಅಧ್ಯಕ್ಷ ನಿಂಗರಾಜು ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಶೋಷಿತ ವರ್ಗದವರು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತ ನೀಡಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದು, ಕಾರ್ಯಕರ್ತರು ಅಧಿಕಾರದಲ್ಲಿರುವ ಮಂತ್ರಿ ಶಾಸಕರುಗಳನ್ನ ಬಳಸಿಕೊಂಡು ಸಮ ಸಮಾಜದ ಅಭಿವೃದ್ಧಿಯ ಜೊತೆಗೆ, ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ಜನರನ್ನು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುವಂತೆ ಮನವರಿಕೆ ಮಾಡಬೇಕು ಎಂದರು.
ಸಭೆಯಲ್ಲಿ ಗ್ರಾಮಾಂತರ ತಾಲೂಕಿನ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆಂಪಣ್ಣ, ನರಸಿಂಹಮೂರ್ತಿ, ಆಗಳ ಕೋಟೆ ನರಸಿಂಹರಾಜು, ಸೇರಿದಂತೆ ಅಲ್ಪಸಂಖ್ಯಾತ ಮುಖಂಡರಾದ ಸೈಯದ್ ದಾದಾಪೀರ್, ನವೀದ್, ಅಜ್ಮಲ್, ಅರಕೆರೆ ಪಂಚಣ್ಣ, ಶಿವನಂಜಪ್ಪ, ಪ್ರಸನ್ನಕುಮಾರ್ ಇದ್ದರು.


