Friday, September 20, 2024
Google search engine
Homeಜಿಲ್ಲೆಬರಗೂರು ರಾಮಚಂದ್ರಪ್ಪ ವಿಧಾನಪರಿಷತ್ ಸದಸ್ಯರಾದರೆ ನನಗೂ ಸಂತೋಷ - ಸಚಿವ ಕೆ.ಎನ್.ರಾಜಣ್ಣ

ಬರಗೂರು ರಾಮಚಂದ್ರಪ್ಪ ವಿಧಾನಪರಿಷತ್ ಸದಸ್ಯರಾದರೆ ನನಗೂ ಸಂತೋಷ – ಸಚಿವ ಕೆ.ಎನ್.ರಾಜಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರಗೂರು ರಾಮಚಂದ್ರಪ್ಪ ಅವರನ್ನು ಕಂಡರೆ ಬಹಳ ಪ್ರೀತಿ ಮತ್ತು ಅಚ್ಚುಮೆಚ್ಚು. ಸಿದ್ದರಾಮಯ್ಯ ಅವರ ಈ ಕಾಲದಲ್ಲೂ ಬರಗೂರರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ಚರ್ಚೆ ಜೋರಾಗಿಯೇ ಇದೆ. ನನಗೂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಕಾಣಬೇಕೆಂಬ ನೂರರಷ್ಟು ಆಸೆ ನನಗೂ ಇದೆ. ಇದಕ್ಕಾಗಿ ಕಾಲಕೂಡಿ ಬರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ತುಮಕೂರಿನ ಕನ್ನಡಭವನದಲ್ಲಿ ಪ್ರೊ.ಬರಗೂರು ಗೆಳೆಯರ ಬಳಗ ಮತ್ತು ಅಂಕಿತ ಪುಸ್ತಕ ಬೆಂಗಳೂರು ಇವರ ಸಹಯೋಗದಲ್ಲಿ ಜುಲೈ 30ರಂದು ಹಮ್ಮಿಕೊಂಡಿದ್ದ ನಾಡೋಜ ಪ್ರೊ.ಬರಗೂರು ರಾಮಚಂದ್ರ ಅವರ ‘ಕಾಗೆ ಕಾರುಣ್ಯದ ಕಣ್ಣು’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಕಂಡರೆ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಮತ್ತು ಎಸ್.ಬಂಗಾರಪ್ಪ ಅವರಿಗೂ ಅಚ್ಚುಮೆಚ್ಚು. ಅವರ ಕಾಲದಲ್ಲೂ ಬರಗೂರರನ್ನು ವಿಧಾನ ಪರಿಷನ್ ಸದಸ್ಯರನ್ನಾಗಿ ಮಾಡಬೇಕೆಂಬ ಕೂಗು ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗಲೂ ಅದೇ ಮಾತುಗಳು ಕೇಳಿಬರುತ್ತಿವೆ. ಆದರೆ ಅದಕ್ಕೆ ಕಾಲ ಕೂಡಿ ಬರಬೇಕು ಎಂದರು.

ನಾನು ಬಹಳ ವರ್ಷ ಮಂತ್ರಿಯಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ಆಗಲಿಲ್ಲ. ಏನೇನೋ ಸಮಸ್ಯೆಗಳು ಎದುರಾದವು. ಹಾಗೆಯೇ ಬರಗೂರು ರಾಮಚಂದ್ರಪ್ಪ ವಿಧಾನ ಪರಿಷತ್ ಸದಸ್ಯರಾದರೆ ನನಗೆ ಅಸಮಾಧಾನ ಇಲ್ಲ. ಆದರೆ ಯಾವುದಕ್ಕೂ ಕೂಡ ಸಮಯ ಕೂಡಿಬರಬೇಕು. ಇದರಲ್ಲಿ ಬರಗೂರು ರಾಮಚಂದ್ರಪ್ಪ ಅವರಿಗೆ ನಂಬಕೆ ಇಲ್ಲ. ಆದರೆ ಬರಗೂರರು ವಿಧಾನ ಪರಿಷತ್ ಸದಸ್ಯರಾಗುವುದು ನಿಮ್ಮೆಲ್ಲರಿಗಿಂತ ನೂರು ಪಟ್ಟು ನನಗೆ ಆಸೆ ಇದೆ. ಅವರ ಪರವಾಗಿದ್ದೇನೆ ಎಂದಾಗ ಸಭಿಕರಿಂದ ಕರತಾಡನ ವ್ಯಕ್ತವಾಯಿತು.

ನಿಮ್ಮೆಲ್ಲರ ಆಶಯದಂತೆ ಅವರು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಆಗಿಲಿ. ನಾನು ಅವರ ಅಭಿಮಾನಿಯಾಗಿ ಅವರ ಬಗ್ಗೆ ಹೆಚ್ಚಿನ ಗೌರವ ಇಟ್ಟುಕೊಂಡಿದ್ದೇನೆ. ಅವರು ವಿಧಾನ ಪರಿಷತ್ ಸ್ಥಾನಕ್ಕೆ ಅರ್ಹತೆಯನ್ನು ಹೊಂದಿದ್ದಾರೆ. ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿದರೆ ಆ ಸ್ಥಾನಕ್ಕೂ ಒಂದು ಗೌರವ ಸಿಗುತ್ತದೆ. ಹಾಗಾಗಿ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಬೆಂಬಲ ವ್ಯಕ್ತಪಡಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಕಾಗೆ ಕಾರುಣ್ಯದ ಕಣ್ಣು ಕೃತಿ ಜಗತ್ತಿನ ರೋಗಕ್ಕೆ ಒಂದು ಚಿಕಿತ್ಸೆ ನೀಡುವಂತಹ ಕೃತಿಯಾಗಿದೆ. ಜಗತ್ತಿನಲ್ಲಿ ಒಂದು ದೊಡ್ಡ ರೋಗ ಇದೆ. ಅದು ಶ್ರೇಷ್ಠತೆಯ ವ್ಯಸನ. ಅದು ಪ್ರಾದೇಶಿಕವಾಗಿ ಇರಬಹುದು, ಲಿಂಗದ ರೂಪದಲ್ಲಿ ಇರಬಹುದು. ಗಂಡು-ಹೆಣ್ಣು ನಾನು ಬಹಳ ಶ್ರೇಷ್ಟ ಎನ್ನುವುದು ಇರಬಹುದು. ಹುಟ್ಟಿನ ಹಿನ್ನೆಲೆಯಲ್ಲಿ ಇರಬಹುದು. ಹೀಗೆ ನೂರೆಂಟು ಸಮಸ್ಯೆಗಳು ಇರುತ್ತವೆ ಎಂದರು.

ಇಂಡಿಯಾದಂತಹ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಅಸ್ಪೃಶ್ಯತೆ ಇದೆ. ಇಷ್ಟೆಲ್ಲಾ ತಾರತಮ್ಯಗಳಿರುವ ದೊಡ್ಡ ಕಾಯಿಲೆ. ಜಾತಿ ಬೌತಿಕವಾಗಿ ಕಣ್ಣಿಗೆ ಕಾಣುವಂತಿದ್ದರೆ ಅದನ್ನು ಬಂದೂಕು ತೆಗೆದುಕೊಂಡು ಸುಡಬಹುದಿತ್ತು. ಆದರೆ ಜಾತಿ ಎನ್ನುವುದು ಕಣ್ಣಿಗೆ ಕಾಣದ ರೋಗ. ಅಗೋಚರವಾದ ಜಾತಿ ಕಾಯಿಲೆಗೆ ಇದುವರೆಗೂ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಜಾತಿಗೂ ಚಿಕಿತ್ಸೆ ಇದೆ. ಅದು ಸ್ವ ಚಿಕಿತ್ಸೆ ಮಾಡಿಕೊಳ್ಳಬೇಕು. ಅದು ಬರಗೂರು ಅವರ ನಿಲುವು, ಒಲವಿನಲ್ಲಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಬರಗೂರು ರಾಮಚಂದ್ರಪ್ಪ ಅವರು ಸರ್ಕಾರದ ಜೊತೆ ಸಂವಾದ ಮಾಡುತ್ತಾರೆ. ಸಂವಾದ ಮಾಡಿ ಪಾಲಿಸಿಗಳನ್ನು ರೂಪಿಸುತ್ತಾರೆ. ಜನ ವಿರೋಧಿಯಾದ ನೀತಿಗಳನ್ನು ಬದಲಾಯಿಸುವುದು ಇಲ್ಲವೇ ಹೊಸ ನೀತಿಗಳನ್ನು ರೂಪಿಸುವಂತಹ ಕೆಲಸವನ್ನು ಸಹ ಬರಗೂರು ಮಾಡುತ್ತಾರೆ. ಕೋಟ್ಯಂತರ ಜನ ಮಾಡುವ ಕೆಲಸವನ್ನು ಸರ್ಕಾರದ ಮೇಲೆ ಒತ್ತಡ ಹಾಕಿ ಒಬ್ಬ ವ್ಯಕ್ತಿ ಜನರ ಧ್ವನಿಯಾಗಿ ಮಾಡುತ್ತಾರೆ. ಇದು ದೊಡ್ಡ ಸಾಧನೆ. ಇಂತಹ ವ್ಯಕ್ತಿಗಳು ಸರ್ಕಾರದ ಜೊತೆಗೆ ಇದ್ದರೆ ಸಾವಿರಾರು ಜನ ಮಾಡುವ ಹೋರಾಟವನ್ನು ತಪ್ಪಿಸಬಹುದು. ಇಂತಹ ಧ್ವನಿಯಾಗಿರಲು ಅವಕಾಶ ನೀಡಬೇಕು ಎಂದು ತಿಳಿಸಿದರು.

ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಎಷ್ಟೋ ಸಾರಿ ಹುಡುಕಿಕೊಂಡು ಬಂದ ಎಂಎಲ್.ಸಿ ಸ್ಥಾನವನ್ನು ಬಿಟ್ಟಿದ್ದೇನೆ. ನನಗೆ ಮನೆಗೆ ಬಂದದ್ದನ್ನು ಬಿಟ್ಟಿದ್ದೇನೆ. ಅದು ಬೇರೆಯ ವಿಷಯ. ಈ ಸಮಾರಂಭವನ್ನು ಏರ್ಪಡಿಸಿರುವುದು ನನ್ನನ್ನು ಎಂಎಲ್.ಸಿ. ಮಾಡಲಿಕ್ಕೆ ಅಲ್ಲ. ತಪ್ಪು ವ್ಯಾಖ್ಯಾನಗಳನ್ನು ಮಾಡುವ ಕಾಲದಲ್ಲಿ ಇಂತಹವುಗಳು ನಡೆಯುತ್ತವೆ. ಹಾಗೆ ಅರ್ಥ ಮಾಡಿಕೊಳ್ಳುವುದು ಬೇಡ ಎಂದು ಸ್ಪಷ್ಟಪಡಿಸಿದರು.

ಇದು ಅಪವ್ಯಾಖ್ಯಾನಗಳ ಕಾಲ. ಸುಳ್ಳಿನ ವಿಜೃಂಭಣೆ ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಬರಗೂರು ಅವರ ಪುಸ್ತಕ. ನಮ್ಮ ಜಿಲ್ಲೆಯವರು ಇದು ಪ್ರೀತಿಯಿಂದ ಮಾಡಿದ ಸಮಾರಂಭ. ಇದನ್ನು ತಪ್ಪಾಗಿ ವ್ಯಾಖ್ಯಾನ ಮಾಡಬಾರದು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದ ಸುಂದರರಾಜ್, ಲೇಖಕ ಡಾ.ರಾಜಪ್ಪ ದಳವಾಯಿ, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಆಕಾಂಕ್ಷ ಬರಗೂರು ಇದ್ದರು. ಸುಫಿಯಾ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ಓಬಯ್ಯ ಸ್ವಾಗತಿಸಿ, ಪತ್ರಕರ್ತ ರಾಜ್ ಕುಮಾರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಎಚ್.ಗೋವಿಂದಯ್ಯ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular