ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ, ಸಾಂವಿಧಾನಿಕ ಹಕ್ಕುಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧ ಪಕ್ಷಗಳು ಒಂದಾಗಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ರಾಹುಲ್ ಗಾಂಧಿ ಅವರ ಅನರ್ಹತೆ, ಮಹಾರಾಷ್ಟ್ರದ ಬೆಳವಣಿಗೆ ಇದಕ್ಕೆ ಸಾಕ್ಷಿ ಎಂದರು.
ಮಣಿಪುರ ಕಳೆದ 75 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಆ ಬಗ್ಗೆ ಒಂದೇ ಒಂದು ಪರಿಹಾರ ಇಲ್ಲ. ಈ ಬಗ್ಗೆ ದೇಶದ ಪ್ರಧಾನಮಂತ್ರಿಗಳು ಒಂದೇ ಒಂದು ಮಾತನಾಡಿಲ್ಲ. ಇದು ಆಘಾತಕಾರಿ ಬೆಳವಣಿಗೆ. ಇನ್ನು ದೇಶದ ಜನ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ಅಧಿಕಾರ ಪಡೆಯಲು ಸಭೆ ಸೇರುತ್ತಿಲ್ಲ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಯುತ್ತಿರುವ ಸಭೆ. ಈ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಮಯ ಬಂದಾಗ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದು ವಿರೋಧ ಪಕ್ಷಗಳ ಎರಡನೇ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು. ಜುಲೈ 20ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ತಂತ್ರಗಾರಿಕೆ ರೂಪಿಸಲಾಗುವುದು. ಈ ಸಭೆ ರಾಷ್ಟ್ರ ರಾಜಕಾರಣದಲ್ಲಿ ಗೇಮ್ ಚೆಂಜರ್ ಆಗಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾತನಾಡಿ, ಪಾಟ್ನಾ ಸಭೆ ನಂತರ ಅವರಿಗೆ ಎನ್ ಡಿ ಎ ಮೈತ್ರಿಕೂಟ ನೆನಪಾಗಿದೆ. ಈಗ ಅವರು ನಾಳೆ ಎನ್ ಡಿ ಎ ಸಭೆ ನಡೆಸುತ್ತಿದ್ದಾರೆ. ಈ ಮೈತ್ರಿಕೂಟಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದು ಒಂದು ಪಕ್ಷದ ಮೈತ್ರಿ ಅಲ್ಲ. ಪಾಟ್ನಾ ಸಭೆಯಲ್ಲಿ 24 ಪಕ್ಷಗಳು ಭಾಗವಹಿಸಿದ್ದು, ಬೆಂಗಳೂರಿನ ಸಭೆಗೆ 26 ಪಕ್ಷಗಳು ಭಾಗವಹಿಸಲಿವೆ. ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ರಾಹುಲ್ ಗಾಂಧಿ ನಮ್ಮ ಪಕ್ಷದ ಮಾಸ್ ನಾಯಕ. ಕಳೆದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯನ್ನು ಶ್ಲಾಘಿಸಿದ್ದಾರೆ ಎಂದರು.
ದಕ್ಷಿಣದಿಂದ ಯಾವ ಸಂದೇಶ ನೀಡಲು ಹೊರಟಿದ್ದೀರಿ, “ಈ ಸಭೆಯಲ್ಲಿ ಯಾವ ವಿಚಾರ ಚರ್ಚೆ ಮಾಡಲಾಗುವುದು ಎಂದು ಈಗ ಹೇಳಲು ಸಾಧ್ಯವಿಲ್ಲ. ಇಲ್ಲಿ ಕೇವಲ ಕಾಂಗ್ರೆಸ್ ತೀರ್ಮಾನ ಮಾತ್ರವಲ್ಲ. ಎಲ್ಲ ಪಕ್ಷಗಳೂ ಸೇರಿ ತೀರ್ಮಾನ ಮಾಡಲಿದ್ದಾರೆ. ಸೋನಿಯಾ ಗಾಂಧಿ ಅವರ ಅನುಭವ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಶಕ್ತಿ ತುಂಬಲಿದೆ” ಎಂದು ತಿಳಿಸಿದರು.


