Friday, January 30, 2026
Google search engine
Homeಮುಖಪುಟಕೇಂದ್ರ ಸರ್ಕಾರದ ವಿರುದ್ಧ ಜೂನ್ 20ರಂದು ರಾಜ್ಯಾದ್ಯಂತ ಪ್ರತಿಭಟನೆ - ಡಿ.ಕೆ.ಶಿವಕುಮಾರ್

ಕೇಂದ್ರ ಸರ್ಕಾರದ ವಿರುದ್ಧ ಜೂನ್ 20ರಂದು ರಾಜ್ಯಾದ್ಯಂತ ಪ್ರತಿಭಟನೆ – ಡಿ.ಕೆ.ಶಿವಕುಮಾರ್

ಕರ್ನಾಟಕ ರಾಜ್ಯದ ಪ್ರತಿಷ್ಠಿತ ಯೋಜನೆ ಅನ್ನಭಾಗ್ಯ ಜಾರಿಗೆ ಅಗತ್ಯ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರ ಅವಕಾಶ ನಿರಾಕರಿಸಿರುವುದು ಬಿಜೆಪಿಯ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿಗೆ ಸಾಕ್ಷಿ. ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ 20 ರಂದು ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜನರಲ್ಲಿ ಅರಿವು ಮೂಡಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಐದು ಗ್ಯಾರಂಟಿ ಘೋಷಿಸಿತ್ತು. ಇದರ ಜಾರಿ ಬಗ್ಗೆ ವಿರೋಧ ಪಕ್ಷದ ಸ್ನೇಹಿತರು ಅನೇಕ ಟೀಕೆ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಬಂದ ಮೊದಲ ದಿನವೇ ಮೊದಲ ಆದೇಶ ಹೊರಡಿಸಿ ನಮ್ಮ ಬದ್ಧತೆ ಪ್ರದರ್ಶಿಸಿದ್ದೇವೆ. ಎರಡನೇ ಸಂಪುಟ ಸಭೆಯಲ್ಲಿ ಈ ಯೋಜನೆ ಜಾರಿ ಸಮಯ ನಿರ್ಧರಿಸಿದ್ದೇವೆ. ವಿರೋಧ ಪಕ್ಷಗಳ ಟೀಕೆಗೆ ನಾವು ಉತ್ತರ ನೀಡುವುದಿಲ್ಲ. ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ ಎಂದರು.

ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಮಾಡಿದ್ದು, ಮುಂದಿನ ತಿಂಗಳಿಂದ ಯೋಜನೆ ಜಾರಿಗೆ ತೀರ್ಮಾನ ಮಾಡಿದ್ದೆವು. ಇದಕ್ಕಾಗಿ ಭಾರತೀಯ ಆಹಾರ ಪ್ರಾಧಿಕಾರಕ್ಕೆ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪ್ರಾಧಿಕಾರ ಕೂಡ ಜೂನ್ 12 ರಂದು ಜುಲೈ ತಿಂಗಳಲ್ಲಿ ಇ-ಹರಾಜು ಮೂಲಕ ಅಕ್ಕಿ ನೀಡುವುದಾಗಿ ಅನುಮತಿ ನೀಡಿತ್ತು. 2,08,425.750 ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಅನುಮತಿ ನೀಡುವುದಾಗಿ ಪ್ರಾಧಿಕಾರ ಪತ್ರ ಬರೆದಿತ್ತು. ಇದಾದ ಮರುದಿನ ಅಂದರೆ ಜೂನ್ 13 ರಂದು, ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವುದನ್ನು ತಡೆಯಲಾಗಿದೆ ಎಂದು ತಿಳಿಸಿದೆ.

ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಇದು ಸಾಕ್ಷಿ. ಕಾಂಗ್ರೆಸ್ ಪಕ್ಷಕ್ಕೆ ಜನ ಹಾಕಿರುವ ಮತಗಳಿಗೆ ಬಿಜೆಪಿಯ ಭ್ರಷ್ಟ ಸರ್ಕಾರ ಧಿಕ್ಕಾರ ಹಾಕಿದೆ. ಬಡವರಿಗೆ ದ್ರೋಹ ಮಾಡುತ್ತಿದೆ. ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ. ಬಿಜೆಪಿ ಎಂದರೆ ಬಡವರಿಗೆ ದ್ರೋಹ ಬಗೆಯುವ ಪಕ್ಷವಾಗಿದೆ. ಕೇಂದ್ರದ ಈ ದ್ರೋಹ ಖಂಡಿಸಿ ಬರುವ ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುವುದು. ಈ ಪ್ರತಿಭಟನೆಯಲ್ಲಿ ಆಯಾ ಜಿಲ್ಲೆಯ ಶಾಸಕರು ಭಾಗವಹಿಸಬೇಕು ಎಂದು ಹೇಳಿದರು.

ಕೇಂದ್ರ ಸರಕಾರ ನೀಡದಿದ್ದರೂ ನಾವು 10 ಕೆ.ಜಿ ಅಕ್ಕಿ ನೀಡುತ್ತೇವೆ. ಅನ್ನ ಭಾಗ್ಯ ಯೋಜನೆ ಜಾರಿ ಆಗಲಿದೆ. ಮುಖ್ಯಮಂತ್ರಿಗಳು, ಸಚಿವರು ಬೇರೆ ರಾಜ್ಯಗಳ ಜತೆ ಚರ್ಚೆ ಮಾಡುತ್ತಿದ್ದೇವೆ. ನಾವು ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಲು ಸಾಧ್ಯವಿಲ್ಲ ಎಂದೇನಿಲ್ಲ. ಇದು ಒಕ್ಕೂಟ ವ್ಯವಸ್ಥೆ. ದೇಶದಲ್ಲಿ ಈಗಾಗಲೇ ಇರುವ ವ್ಯವಸ್ಥೆ ಹಾಗೂ ಪ್ರಕ್ರಿಯೆ ಮೂಲಕ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪಾರದರ್ಶಕ ವ್ಯವಸ್ಥೆಯಲ್ಲಿ ಖರೀದಿಗೆ ನಾವು ಎಫ್ ಸಿಐಗೆ ಕೇಳಿದ್ದೇವೆ. ಕೇಂದ್ರದ ಬಳಿ 7 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ನಾವು ಕೇವಲ 2.85 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಳಿದ್ದೆವು. ದಾಸ್ತಾನು ಇದ್ದರೂ ಅಕ್ಕಿ ನೀಡಲು ನಿರಾಕರಿಸಿದ್ದಾರೆ. ಕೇಂದ್ರದ ಈ ಧೋರಣೆ ಪ್ರತಿಭಟಿಸಿ, ಜನರಿಗೆ ಅರಿವು ಮೂಡಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular