ಪಾವಗಡ ತಾಲ್ಲೂಕಿನಲ್ಲಿ ರೈತರು 10 ಸಾವಿರ ಎಕರೆ ಭೂಮಿಯನ್ನು ನೀಡಿದರೆ ಸೋಲಾರ್ ಪಾರ್ಕನ್ನು ವಿಸ್ತರಣೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಪಾವಗಡ ತಾಲೂಕಿನ ತಿರುಮಣಿ ಸಮೀಪದ ಸೋಲಾರ್ ಪಾರ್ಕ್ ಗೆ ಇಂಧನ ಸಚಿವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು.
ಪಾವಗಡ ತಾಲ್ಲೂಕಿನಲ್ಲಿರುವ ಸೋಲಾರ್ ಪಾರ್ಕ್ ನಿಂದ 2400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಸ್ಥಳೀಯರು ಮತ್ತಷ್ಟು ಜಮೀನು ನೀಡಿದರೆ ಸೋಲಾರ್ ಪಾರ್ಕ್ ಅನ್ನು ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯ ಸಾವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಜೊತೆಗೆ ಮುಂದಿನ ಪೀಳಿಗೆಗೆ ಸುಸ್ಥಿತರ ಭವಿಷ್ಯವನ್ನು ಖಚಿತಪಡಿಸಲು ಸರ್ಕಾರ ಬದ್ಧವಾಗಿದ ಎಂದು ಹೇಳಿದ್ದಾರೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಪಾವಗಡ ಸೋಲಾರ್ ಪಾರ್ಕ್ ಸ್ವಚ್ಛ ಮತ್ತು ಸುಸ್ಥಿರ ಇಂಧನ ಪರಿಹಾರಗಳಿಗೆ ನಮ್ಮ ಬದ್ದತೆಯ ಕುರುಹಾಗಿದೆ ಎಂದರು.
ಶುದ್ಧ ಇಂಧನ ಉತ್ಪಾದನೆಗೆ ದೇಶ ಹಾಕಿಕೊಂಡಿರುವ ಗುರಿಗೆ ಇಲ್ಲಿನ ಸೋಲಾರ್ ಪಾರ್ಕ್ ಈಗಾಗಲೇ ದೊಡ್ಡ ಕೊಡುಗೆ ನೀಡಿದೆ. ಅದರ ಅತ್ಯಾಧುನಿಕ ದ್ಯುತಿ ವಿದ್ಯುತ್ ಜನಕ ಫಲಕಗಳು, ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ವಿದ್ಯುತ್ ಸಂಗ್ರಹ ವ್ಯವಸ್ಥೆ ಮತ್ತು ಸಮರ್ಥ ಗ್ರಿಡ್ ಏಕೀಕರಣದೊಂದಿಗೆ ಸೋಲಾರ ಪಾರ್ಕ್ ವರ್ಷಕ್ಕೆ 4.5 ಶತಕೋಟಿ ಯೂನಿಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಇಂಧನ ಅಭಿವೃದ್ಧ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಶಾಸಕ ಎಚ್.ವಿ.ವೆಂಕಟೇಶ್ ಉಪಸ್ಥಿತರಿದ್ದರು.


