Friday, September 20, 2024
Google search engine
Homeಮುಖಪುಟಕಸಾಪ ಅಧ್ಯಕ್ಷ ಮಹೇಶ್ ಜೋಷಿ ವಿರುದ್ಧ ಪ್ರತಿಭಟನೆ

ಕಸಾಪ ಅಧ್ಯಕ್ಷ ಮಹೇಶ್ ಜೋಷಿ ವಿರುದ್ಧ ಪ್ರತಿಭಟನೆ

ಆತ್ಮೀಯರೇ..,

ಕನ್ನಡ ಸಾಹಿತ್ಯ ಪರಿಷತ್ತನ್ನು ಸಮಸ್ತ ಕನ್ನಡಿಗರ ಆಶಯಗಳ ಪರವಾಗಿ ಮತ್ತು ಜನಮುಖಿಯಾಗಿ ಮುನ್ನಡೆಸುತ್ತೇನೆಂದು ಹೇಳಿಕೊಂಡು, ಹಣ ಬಲ ಹಾಗೂ ಜಾತಿಯ ಲಾಭಿಯನ್ನು ಬಳಸಿಕೊಂಡು ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮಹೇಶ್ ಜೋಷಿ (ಪೆಂಜೋ), ಕಸಾಪದ ನಾಯಕತ್ವ ವಹಿಸಿಕೊಳ್ಳುವ ನೈತಿಕ ಅರ್ಹತೆಯನ್ನು ಕಳೆದುಕೊಂಡಿದ್ದಾರೆ.

ಕ್ಯಾಬಿನೆಟ್ ಗ್ರೇಡ್ ಸಚಿವರ ಸ್ಥಾನಮಾನಗಳ ಅಧಿಕಾರದ ಮದವೇರಿದ ಮಹೇಶ್ ಜೋಷಿ ಐಷಾರಾಮಿ ಕಾರು, ವೈಭವೋಪೇತ ಕಛೇರಿ, ಸುಖಾಸೀನ ಖುರ್ಚಿಯ ಅಮಲಿನಲ್ಲಿ ಸಮಕಾಲೀನ ಕನ್ನಡ-ಕನ್ನಡಿಗ- ಕರ್ನಾಟಕ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳಿಗೆ ಕಿವಿಗೊಡಲಿಲ್ಲ, ದನಿಗೊಡಲಿಲ್ಲ. ಕೋಮುವಾದ, ಜಾಗತೀಕರಣ, ಪಠ್ಯಪುಸ್ತಕದ ಕೇಸರೀಕರಣ, ಕನ್ನಡ ಮಾಧ್ಯಮ ಶಾಲೆಗಳು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡಿಗರ ಮೇಲಾಗುವ ದುಷ್ಪರಿಣಾಮಗಳು, ಹಿಂದಿ ಹೇರಿಕೆ, ಸಂಸ್ಕೃತ ಹೇರಿಕೆ, ಗಡಿ ಸಮಸ್ಯೆ, ನದಿ ನೀರಿನ ಹಂಚಿಕೆ, ಕನ್ನಡ ವಿರೋಧಿ ಅವೈಜ್ಞಾನಿಕ ತ್ರಿಭಾಷಾ ಸೂತ್ರ, ಕನ್ನಡ ಅಸ್ಮಿತೆಗಳ ಅಗೌರವ ಇನ್ನೂ ಮುಂತಾದ ಗಂಭೀರವಾದ ವಿಷಯಗಳಲ್ಲಿ ಕೆಲವೊಮ್ಮೆ ತಟಸ್ಥ ಧೋರಣೆ ಅನುಸರಿಸುತ್ತಲೂ ಕೆಲವೊಮ್ಮೆ ಆಳುವ ವರ್ಗಗಳ ಹಿತಾಸಕ್ತಿಗಳಿಗೆ ಅನುಗುಣವಾಗಿ ವರ್ತಿಸುತ್ತಲೂ ಬಂದಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಧ್ವನಿಯಾಗಬೇಕಿದ್ದ ಕಸಾಪ ಮಹೇಶ್ ಜೋಷಿಯವರ ನಾಯಕತ್ವದಲ್ಲಿ ಕನ್ನಡಿಗರಿಗೆ ಅಗೌರವ ತರುವ ಕೇಂದ್ರದಂತಾಗಿಬಿಟ್ಟಿದೆ.

ಕನ್ನಡದ ಮಹಾಕವಿಯಾದ ಆದಿಕವಿ ಪಂಪನ ಹೆಸರಿನಲ್ಲಿರುವ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಬದಲಿಸುವ ಹೀನ ಕೃತ್ಯಕ್ಕೆ ಮುಂದಾಗಿದ್ದ ಮಹೇಶ್ ಜೋಷಿ, ಕಸಾಪ ಸದಸ್ಯತ್ವ ಪಡೆಯಲು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆಯನ್ನು ನಿಗದಿಪಡಿಸುವ ಮೂಲಕ ಒಂದರ್ಥದಲ್ಲಿ ಅನಕ್ಷರಸ್ಥರನ್ನು ಅವಮಾನಿಸಿದರು. ಇಂತಹ ಯಾವುದೇ ಶೈಕ್ಷಣಿಕ ಅರ್ಹತೆಗಳಿಲ್ಲದೆಯೂ ಸಾಹಿತ್ಯ ರೂಪಿಸಿರುವ ಮತ್ತು ಕನ್ನಡ ಸೇವಾ ಮನೋಭಾವದ ಜನರನ್ನು ಕಸಾಪದ ಸದಸ್ಯ ಸ್ಥಾನ ಪಡೆಯಲಾರದವರೆಂಬಂತೆ ಹೀನಾಯಿಸಿದರು.

ಚಂದನ ದೂರದರ್ಶನದ ಮೂಲಕ ಮತ್ತು ‌ಅಲ್ಲಿ ನಿಲಯದ ವಿದೂಷಕನಂತೆ ಹಾಡು ಹಾಡುತ್ತಾ ಜನರನ್ನು ವಿಕೃತವಾಗಿ ರಂಜಿಸುತ್ತಾ ಹೆಸರು ಗಳಿಸಿದ ಈ ವ್ಯಕ್ತಿ, ಅದೇ ದೂರದರ್ಶನದ ನಿರ್ದೇಶಕಿ ನಿರ್ಮಲಾ ಎಲಿಗಾರ್ ಅವರೊಂದಿಗೆ ನಡೆದುಕೊಂಡ ದುರಹಂಕಾರದ ವರ್ತನೆಯನ್ನು ಯಾರೊಬ್ಬರೂ ಮರೆಯಲಾರರು. ಸಾಹಿತ್ಯ ಸಮ್ಮೇಳನದ ಲೋಪಗಳನ್ನು ಮತ್ತು ತನ್ನ ಸರ್ವಾಧಿಕಾರಿ ನಡೆಯನ್ನು ನಿರ್ಮಲಾ ಎಲಿಗಾರ್ ಪ್ರಶ್ನಿಸಿದರೆಂಬ ಕಾರಣಕ್ಕೆ ನಿರ್ಮಲಾರ ಕಸಾಪ ಸದಸ್ಯತ್ವ ರದ್ದುಪಡಿಸಿರುವ ಮಹೇಶ್ ಜೋಷಿ (ಪೆಂಜೋ) ಅವರ ಧೋರಣೆ ಅತ್ಯಂತ ಖಂಡನೀಯ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಲೇಖಕರಿಗೆ, ಮಹಿಳೆಯರಿಗೆ, , ಮುಸ್ಲಿಂ ಲೇಖಕರಿಗೆ ಸೂಕ್ತ ಪ್ರಾತಿನಿಧ್ಯ ದೊರಕದಂತೆ ನೋಡಿಕೊಂಡರು. ಪ್ರೊ.ಪುರುಷೋತ್ತಮ ಬಿಳಿಮಲೆಯವರು ಇದನ್ನು ವಿರೋಧಿಸಿದಾಗ, ಕಸಾಪದ ಸಾರ್ವಜನಿಕ ಕರ್ತವ್ಯ ಹಾಗೂ ಹೊಣೆಗಾರಿಕೆಗಳೇನೆಂದು ಪ್ರಶ್ನಿಸಿದಾಗ, “ಪ್ರೊ.ಬಿಳಿಮಲೆಯವರು ಹೇಳಿದ್ದ ವ್ಯಕ್ತಿಗೆ ಪೆಂಡಾಲ್ ಕಾಂಟ್ಯಾಕ್ಟ್ ನೀಡದಿದ್ದರಿಂದ ಮುಸಲ್ಮಾನ ಮತ್ತು ದಲಿತರನ್ನು ಸಾಹಿತ್ಯ ಸಮ್ಮೇಳನದಲ್ಲಿ ಕಡೆಗಣಿಸಲಾಗಿದೆಯೆಂದು ಧಾರ್ಮಿಕ ಅಸಹನೆ ಸೃಷ್ಟಿಸಿದ್ದಾರೆ” ಎಂದು ಪ್ರೊ.ಬಿಳಿಮಲೆ ವಿರುದ್ಧ ಕ್ಷುಲ್ಲಕ ಆರೋಪ ಮಾಡಿದ್ದರಿಂದಾಗಿ, ಮಹೇಶ್ ಜೋಷಿಯವರನ್ನು “ಪೆಂಜೋ” (ಪೆಂಡಾಲ್ ಜೋಷಿ) ಎಂಬ ವಿಶೇಷಣದಿಂದಲೇ ಗುರುತಿಸಬೇಕಾಯಿತು. ಪೆಂಡಾಲ್ ಕಾಂಟ್ರ್ಯಾಕ್ಟ್ ಆರೋಪವು ಸಾರ್ವಜನಿಕರಲ್ಲಿ ಹಾಸ್ಯಾಸ್ಪದ ಸಂಗತಿಯಾಗಿ ಚರ್ಚೆಯಾಯಿತು. ಕಸಾಪಕ್ಕೆ ವಕ್ಕರಿಸಿರುವ “ಪೆಂಡಾಲ್ ಜೋಷಿ (ಪೆಂಜೋ)” ಸಾಂಸ್ಕೃತಿಕ ಲೋಕದ ಬಫೂನ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಮತ್ತು ಅಧಿಕಾರ ಹೊಂದಿರುವೆನೆಂಬ ಠೇಂಕಾರದಿಂದ, “ಕಸಾಪ ಕಚೇರಿಯಲ್ಲಿ ಯಾರಾದರೂ ಏರು ಧ್ವನಿಯಲ್ಲಿ ಮಾತಾಡಿದರೆ ಕ್ರಮ ಜರುಗಿಸಲಾಗುವುದು” ಎಂಬ ಬೆದರಿಕೆಯನ್ನೊಡ್ಡಿದ ಐಲುದೊರೆ ಮಹೇಶ್ ಜೋಷಿಯವರನ್ನು ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ಪರಿಷತ್ತನ್ನು ಶುದ್ಧೀಕರಣಗೊಳಿಸುವ ಜರೂರು ಅಗತ್ಯವಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತರಿಸುವ ಹೊಣೆ ಎಲ್ಲಾ ಪ್ರಜ್ಞಾವಂತ ಕನ್ನಡಿಗರ ಮೇಲಿದೆ.

ನಾಳೆ 12-06-2023 ರ ಸೋಮವಾರ ಬೆಳಗ್ಗೆ 11:00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ, ಮಹೇಶ್ ಜೋಷಿಯವರ ದುರಾಡಳಿತವನ್ನು ಖಂಡಿಸಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ. ನೀವು ಪಾಲ್ಗೊಳ್ಳಲು ಪ್ರೀತಿಯಿಂದ ಕೋರಲಾಗಿದೆ

ಡಾ.ವಡ್ಡಗೆರೆ ನಾಗರಾಜಯ್ಯ

8722724174

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular