ಬೆಂಗಳೂರಿನ ವೈಭವ, ಗೌರವವನ್ನು ಮರಳಿ ತರಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನ ಎಲ್ಲ ಶಾಸಕರು, ಸಂಸದರು, ಎಂಎಲ್‌ಸಿ ಪರಿಷತ್ ಸದಸ್ಯರೊಂದಿಗೆ ಇಂದು ಬೆಂಗಳೂರು ಸಮಗ್ರ ಅಭಿವೃದ್ಧಿ ಕುರಿತು ವಿಧಾನಸೌಧದಲ್ಲಿ ಸಭೆ ನಡೆಸಿ, ಅವರ ಸಲಹೆ, ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ನಿವಾಸಿಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ, ತ್ಯಾಜ್ಯದ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂಡರ್ ಪಾಸ್ ರಸ್ತೆಗಳಲ್ಲಿ ಕ್ಯಾಮೆರಾ ಅಳವಡಿಸುವ ಮೂಲಕ ಮಳೆ ಸುರಿಯವ ವೇಳೆ ಸಂಭವಿಸುವ ಅನಾಹುತಗಳನ್ನು ತಡೆಯಲು ಚಿಂತಿಸಲಾಗಿದೆ ಎಂದರು.
ಬೆಂಗಳೂರಿನ ಪ್ರತಿಯೊಂದು ವಾರ್ಡ್‌ಗೂ ಪ್ರತ್ಯೇಕ ಫೈಲ್ ಇರಬೇಕು. ಸರ್ಕಾರದ ಯಾವುದೇ ಕಾಮಗಾರಿ ನಡೆದರೂ ಕೆಲಸ ಆರಂಭಿಸುವ ಮುನ್ನ, ಕಾಮಗಾರಿ ಪೂರ್ಣಗೊಂಡಿರುವ ಫೋಟೋ ಇರಬೇಕು. ಪ್ರತಿದಿನ ನಡೆಯುವ ಕಾಮಗಾರಿಗಳ ಫೋಟೋ ಇರಬೇಕು. ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಾಂಗ್ರೆಸ್ ಸರ್ಕಾರ ಬದ್ಧವಿದೆ ಎಂದು ಹೇಳಿದ್ದಾರೆ.
ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ, ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಇಂಜಿನಿಯರ್ ಗಳನ್ನು ಸೇವೆಯಿಂದ ಅಮಾನತು ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈಜಿಪುರ ಮೇಲ್ಸೇತುವೆ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಬೇಕು. ಈ ಬಗ್ಗೆ ಅಗತ್ಯವಿರುವ ಆಡಳಿತಾತ್ಮಕ ನಿರ್ಣಯಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಆದೇಶಿಸಲಾಗಿದೆ ಎಂದರು.
ಬೆಂಗಳೂರಿನ ಮುಂದಿನ 20 ವರ್ಷಗಳ ಅಗತ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬೆಂಗಳೂರಿನ ಕೆಲವೆಡೆ ಹೋರ್ಡಿಂಗ್‌ಗಳನ್ನು ಅಳವಡಿಸಲು ಅನುಮತಿ ನೀಡಿದ ಕುರಿತು ಚರ್ಚಿಸಲಾಯಿತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.


