ಬಿಹಾರದಲ್ಲಿ ಗಂಗಾನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಒಂದು ದಿನದ ಬಳಿಕ ಪ್ರತಿಕ್ರಿಯೆ ನೀಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಘಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿದ ಅವರು, ಸೇತುವೆಯನ್ನು ಸರಿಯಾಗಿ ನಿರ್ಮಿಸಲಾಗುತ್ತಿಲ್ಲ ಮತ್ತು ಅದಕ್ಕಾಗಿಯೇ ಏಪ್ರಿಲ್ 2022 ರಿಂದ ಇದು ಎರಡು ಬಾರಿ ಕುಸಿದಿದೆ. ಇದು ಗಂಭೀರ ವಿಷಯವಾಗಿದೆ. ಸಂಬಂಧಪಟ್ಟ ಇಲಾಖೆ ಈಗಾಗಲೇ ಅದರ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
2014ರಿಂದ ನಿರ್ಮಿಸಲಾಗುತ್ತಿರುವ 3.16 ಕಿಮೀ ಸೇತುವೆಯು 14 ತಿಂಗಳಲ್ಲಿ ಎರಡು ಬಾರಿ ಕುಸಿದಿದೆ. ಮೊದಲನೆಯದು ಭಾಗಲ್ಪುರದ ಸುಲ್ತಂಗಂಜ್ ಭಾಗದಲ್ಲಿ ಏಪ್ರಿಲ್ 2022ರಲ್ಲಿ ಮತ್ತು ಎರಡನೇ ಬಾರಿಗೆ ಭಾನುವಾರ ಸಂಜೆ ಖಗಾರಿಯಾ ಭಾಗದಲ್ಲಿ ಕುಸಿದಿದೆ ಎಂದರು.
ಘಟನೆಯ ನಂತರ ಪ್ರತಿಕ್ರಿಯೆ ನೀಡಿರುವ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ರಚನಾತ್ಮಕ ದೋಷಗಳಿಂದಾಗಿ ನಿರ್ಮಾಣ ಹಂತದಲ್ಲಿರುವ ಸೇತುವೆಯನ್ನು ಕೆಡವಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಏಪ್ರಿಲ್ 30ರಂದು ಈ ಸೇತುವೆಯ ಒಂದು ಭಾಗವು ಕುಸಿದಿರುವುದನ್ನು ಸ್ಮರಿಸಬಹುದು. ನಾವು ಅದರ ನಂತರ ನಿರ್ಮಾಣ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿರುವ ಐಐಟಿ ರೂರ್ಕಿಯನ್ನು ಅಧ್ಯಯನ ಮಾಡಲು ಸಂಪರ್ಕಿಸಿದ್ದೇವೆ. ಅದು ಇನ್ನೂ ಬರಬೇಕಿದೆ ಎಂದು ತಿಳಿಸಿದರು.


