ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಿ ಎಂಬ ಹೇಳಿಕೆ ಕೊಟ್ಟಿದ್ದ ಆರೋಪದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ವಿರುದ್ಧ ಮೈಸೂರಿನಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದೆ.
ಫೆಬ್ರವರಿ 15ರಂದು ಮಂಡ್ಯದ ಸಾತನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಿ ಎಂಬ ಹೇಳಿಕೆಯನ್ನು ಮಾಜಿ ಸಚಿವ ಅಶ್ವತ್ಥ ನಾರಾಯಣ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಎಂಬುವರು ಆ ಸಂದರ್ಭದಲ್ಲಿಯೇ ಮೈಸೂರಿನ ದೇವರಾಜ ಪೊಲೀಸ್ ಠಾಣೆ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಸದ್ಯ ಮತ್ತೊಮ್ಮೆ ದೇವರಾಜ ಪೊಲೀಸ್ ಠಾಣೆಗೆ ತೆರಳಿ ಮರು ದೂರು ನೀಡಿದ್ದಾರೆ. ಆ ಬಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಕಾರ್ಯಕ್ರಮದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದ ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರು ಉರಿಗೌಡ, ನಂಜೇಗೌಡರು ಟಿಪ್ಪುವನ್ನು ಹೊಡೆದು ಹಾಕಿದ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಎಂದು ಬಹಿರಂಗವಾಗಿ ಪ್ರಚೋದನೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಫ್ ಐ ಆರ್ ದಾಖಲಾಗುವ ಮುನ್ನಾ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ನಡೆದಿದೆ. ಪೊಲೀಸ್ ಠಾಣಾಧಿಕಾರಿ ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ವಾದ ಪ್ರತಿ ವಾದ ನಡೆದಿದೆ. ಡಾ. ಸಿಎನ್ ಅಶ್ವಥ್ ನಾರಾಯಣ ವಿರುದ್ಧ ದೂರು ದಾಖಲಾಗಿ ಹಲವಾರು ದಿನಗಳು ಕಳೆದಿದ್ಧರೂ ಎಫ್ ಐ ಆರ್ ಏಕೆ ದಾಖಲಾಗಿಲ್ಲ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಾನೂನು ಪ್ರಕಾರ ಏನು ಮಾಡಬೇಕೋ ಅದೇ ಪ್ರಕಾರ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದಿದ್ದಾರೆ. ಇತ್ತ ಪೊಲೀಸ್ ಅಧಿಕಾರಿಯು ನೀವು ಕೊಟ್ಟಿದ್ಧ ದೂರಿನನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ನೀಡಿ ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಆದರೂ, ಪಟ್ಟು ಬಿಡದ ಕಾಂಗ್ರೆಸ್ ಮುಖಂಡರು ಬೇರೊಂದು ದೂರು ನೀಡಿ ಡಾ. ಸಿಎನ್ ಅಶ್ವಥ್ ನಾರಾಯಣ್ ವಿರುದ್ಧ ಎಫ್ ಐ ಆರ್ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.