Friday, November 22, 2024
Google search engine
Homeಮುಖಪುಟಶಾಸಕ ಕೆ.ಎನ್.ರಾಜಣ್ಣಗೆ ಸಚಿವ ಸ್ಥಾನ ನೀಡಲು ಆಗ್ರಹ

ಶಾಸಕ ಕೆ.ಎನ್.ರಾಜಣ್ಣಗೆ ಸಚಿವ ಸ್ಥಾನ ನೀಡಲು ಆಗ್ರಹ

ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕುಂದೂರು ತಿಮ್ಮಯ್ಯ ಒತ್ತಾಯಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆ.ಎನ್.ರಾಜಣ್ಣ ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದರೆ ಅವರು ಎಷ್ಟು ಜನಾನುರಾಗಿಗಳು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅಲ್ಲದೆ ಶೋಷಿತರು, ದಲಿತರ ಪರವಾಗಿ ಕೆಲಸ ಮಾಡುವ ಜಿಲ್ಲೆಯ ರಾಜಕಾರಣಿ ಎಂದರೆ ಕೆ.ಎನ್.ಆರ್, ಹಾಗಾಗಿ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.

ಮಧುಗಿರಿ ಕ್ಷೇತ್ರದ ಶಾಸಕರಾಗಿರುವ ಕೆ.ಎನ್.ರಾಜಣ್ಣ, ನೇರ ಮತ್ತು ನಿಷ್ಠೂರ ರಾಜಕಾರಣಿ. ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಅವರಲ್ಲಿದೆ. ಸಹಕಾರಿ ಕ್ಷೇತ್ರದಲ್ಲಿ ಆಪಾರ ಅನುಭವ ಹೊಂದಿರುವ ಅವರನ್ನು ಮಂತ್ರಿ ಮಾಡುವುದರಿಂದ ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ದಲಿತರು, ಶೋಷಿತರ ಪರವಾಗಿ ನಿಲ್ಲುವ ರಾಜಕಾರಣಿ ಕೆ.ಎನ್.ರಾಜಣ್ಣ ಅವರನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬಳಿ ಸಹ ನಿಯೋಗ ಹೋಗಿ, ಅವರಿಗೂ ಮನವರಿಕೆ ಮಾಡಿಕೊಡಲು ಸಿದ್ದರಿದ್ದೇವೆ. ಕೆ.ಎನ್.ಆರ್.ಮಂತ್ರಿ ಮಾಡುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ.ಹಾಗಾಗಿ ಹೈಕಮಾಂಡ್ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕೆಂದರು.

ವೈದ್ಯ ಡಾ.ಬಸವರಾಜು ಮಾತನಾಡಿ, ದಲಿತರು, ಕಾರ್ಮಿಕರು, ಬಡವರ ಪರವಾಗಿ ದ್ವನಿ ಎತ್ತುವ ಜನಪ್ರತಿನಿಧಿಗಳಲ್ಲಿ ಕೆ.ಎನ್.ಆರ್ ಕೂಡ ಒಬ್ಬರು, ವಿಧಾನಪರಿಷತ್ ಸದಸ್ಯರಾಗಿ, ಶಾಸಕರಾಗಿ, ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಎಂತಹ ಸಂದರ್ಭದಲ್ಲಿಯೂ ದಲಿತರು, ಅಲ್ಪಸಂಖ್ಯಾತರ ಪರ ದನಿ ಎತ್ತುವ ಎದೆಗಾರಿಕೆ ಕೆ.ಎನ್.ರಾಜಣ್ಣ ಅವರಲ್ಲಿದೆ. ಹಾಗಾಗಿ ಅವರನ್ನು ಸಚಿವರನ್ನಾಗಿ ಮಾಡಿ ಜಿಲ್ಲೆಯ ಅಭಿವೃದ್ದಿಗೆ ಇಂಬು ನೀಡುವಂತೆ ಒತ್ತಾಯಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಡಾ.ಅರುಂಧತಿ, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುಸ್ತಾಪ, ಚೇಳೂರು ಶಿವನಂಜಪ್ಪ, ಸುಬ್ಬರಾಯಪ್ಪ, ರೈತ ಸಂಘದ ಎನ್.ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular