Thursday, November 21, 2024
Google search engine
Homeರಾಜಕೀಯಖಾತೆ ಬದಲಿಗೆ ಸಚಿವರ ಒತ್ತಡ - ಸಿಎಂಗೆ ಬಿಕ್ಕಟ್ಟು

ಖಾತೆ ಬದಲಿಗೆ ಸಚಿವರ ಒತ್ತಡ – ಸಿಎಂಗೆ ಬಿಕ್ಕಟ್ಟು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆಯಾಗಿ ಎರಡ್ಮೂರು ದಿನವೂ ಕಳೆದಿಲ್ಲ. ಆಗಲೇ ಹಲವು ಸಚಿವರು ತಮಗೆ ನೀಡಿರುವ ಖಾತೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕೂಡಲೇ ಖಾತೆಗಳನ್ನು ಬದಲು ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.

ಸಚಿವರಾದ ಆನಂದ್ ಸಿಂಗ್, ಹೊಸಕೋಟೆ ಕ್ಷೇತ್ರದ ಸಚಿವ ಎಂ.ಟಿ.ಬಿ.ನಾಗರಾಜ್ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈಗ ನೀಡಿರುವ ಖಾತೆಗಳು ನಮಗೆ ತೃಪ್ತಿ ತಂದಿಲ್ಲ. ಕೂಡಲೇ ಬದಲಿಸಿ ಪ್ರಬಲ ಖಾತೆಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ. ತಮ್ಮನ್ನು ಭೇಟಿಯಾದ ಸಚಿವರನ್ನು ಸಮಾಧಾನಪಡಿಸಿರುವ ಮುಖ್ಯಮಂತ್ರಿಗಳು ಖಾತೆ ಬದಲಿಸುವ ಭರವಸೆ ನೀಡಿದ್ದಾರೆ.

ಅಸಮಾಧಾನಿತ ಸಚಿವರ ಇಷ್ಟಕ್ಕೆ ಸುಮ್ಮನಾಗಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ನಮಗೆ ಅನ್ಯಾಯವಾಗಿದೆ. ನಮ್ಮ ಪರವಾಗಿ ನಿಲ್ಲಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬೆಳವಣಿಗೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಚಿಂತೆಗೆ ಈಡುಮಾಡಿವೆ. ಅಸಮಾಧಾನಿತ ಸಚಿವರನ್ನು ನಿಭಾಯಿಸುವುದು, ಅವರ ಖಾತೆ ಬದಲಿಸುವುದು ಹೇಗೆ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಿವೆ. ಇದರ ನಡುವೆಯೇ ಮುಖ್ಯಮಂತ್ರಿ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು ಮುಂದೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.

ಆರ್.ಎಸ್.ಎಸ್.ನಿಂದ ಹಿನ್ನೆಲೆಯ ಕೆಲ ಸಚಿವರಿಗೆ ಪ್ರಬಲ ಖಾತೆಗಳನ್ನು ನೀಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ. ಸುನಿಲ್ ಕುಮಾರ್ ಅವರಿಗೆ ಇಂಧನ ಖಾತೆ, ಅರಗಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಿರುವುದು ಕೂಡ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ‘ನಾನು ಪ್ರಮುಖ ಖಾತೆಯನ್ನು ನಿರೀಕ್ಷೆ ಮಾಡಿದ್ದೆ. ಆದರೆ ನನ್ನ ನಿರೀಕ್ಷೆ ಹುಸಿಯಾಗಿದೆ. ಎ ಗ್ರೇಡ್ ನಿಂದ ಬಿ ಗ್ರೇಡ್ ಗೆ ಹಿಂಬಡ್ತಿ ನೀಡಿದಂತೆ ಆಗಿದೆ’ ಎಂದು ಎಂ.ಟಿ.ಬಿ. ನಾಗರಾಜ್ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ವಿರುದ್ದ ಬಿನ್ನರಾಗ ಹಾಡುತ್ತಿರುವ ಸಚಿವರು ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ, ವಸತಿ, ಅರಣ್ಯ, ಕೃಷಿ, ಸಮಾಜಕಲ್ಯಾಣದಂಥ ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ಸಚಿವರಿಗೆ ಖಾತೆ ಹಂಚಿಕೆಯಲ್ಲಿ ಹೈಕಮಾಂಡ್ ನಿರ್ದೇಶನವನ್ನು ಶಿರಸಾ ಪಾಲಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಈಗ ಇಕ್ಕಟ್ಟಿಗೆ ಸಿಲುಕುವಂತೆ ಆಗಿದೆ.

ಇನ್ನೊಂದು ಕಡೆ ಜಾರಕಿಹೊಳಿ ಕುಟುಂಬದವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಸಿಡಿ ಹಗರಣದಲ್ಲಿ ಸಿಲುಕಿದ್ದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈ ಸ್ಥಾನವನ್ನು ಅಣ್ಣ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಜಾರಕಿಹೊಳಿಗೆ ಬ್ರದರ್ಸ್ ಗೆ ಸ್ಥಾನ ನೀಡಿಲ್ಲ. ಇದರಿಂದಾಗಿ ಜಾರಕಿಹೊಳಿ ಕುಟುಂಬ ಮತ್ತೆ ಬಂಡೇಳುವ ಲಕ್ಷಣಗಳು ಗೋಚರಿಸುತ್ತಿವೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಇಬ್ಬರು ಮುಖಂಡರ ನಡುವೆ ಯಾವ ಚರ್ಚೆ ನಡೆದಿದೆ ಎಂಬ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ ಬಿಜೆಪಿ ಒಳಗಿನ ಭಿನ್ನ ಬೆಳವಣಿಗೆಗಳು ಮಾತ್ರ ನಿಂತಿಲ್ಲ. ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ

ಮುಖ್ಯಮಂತ್ರಿ ಬೊಮ್ಮಾಯಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿರುವುದು ಬಿಜೆಪಿ ಕೆಲವು ಮುಖಂಡರ ಅಸಮಾಧಾನಕ್ಕೆ ವೇದಿಕೆ ಮಾಡಿಕೊಟ್ಟಿದೆ. ಹಾಸನ ಜಿಲ್ಲೆಯ ಶಾಸಕ ಪ್ರೀತಂಗೌಡ ಮುಖ್ಯಮಂತ್ರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿಗೆ ಮುಂದಿನ ಹಾದಿ ಸುಗಮವಾಗಿಲ್ಲ ಎಂಬುದು ಅರ್ಥವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular