ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ಪರವಾಗಿ ಯುವ ನಾಯಕ ಡಾ. ಕನ್ಹಯ್ಯ ಕುಮಾರ್ ಮಾಧ್ಯಮಗಳ ಗಮನಕ್ಕೆ ಬಾರದಂತೆ ಬಂದು ಚುನಾವಣಾ ಪ್ರಚಾರ ನಡೆಸಿ ಹೋಗಿದ್ದಾರೆ.
ತುಮಕೂರಿನ ಮರಳೂರು ದಿಣ್ಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ಇಕ್ಬಾಲ್ ಅಹಮದ್ ಅವರಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕನ್ಹಯ್ಯ ಕುಮಾರ್, ಮೇ 10ರಂದು ಮತದಾನ ನಡೆಯಲಿದೆ. ಅಂದು ಎಲ್ಲರೂ ತಮ್ಮಗಳ ಹಕ್ಕನ್ನು ಚಲಾಯಿಸಬೇಕು ಮತ್ತ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸರ್ಕಾರಗಳ ತಪ್ಪು ನೀತಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೇವಲ ತುಮಕೂರಿನಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲಿ ರೈತರ ಆತ್ಮಹತ್ಯೆಗಳ ಮುಂದುವರೆದಿವೆ. ಇದಕ್ಕೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಅಭ್ಯರ್ಥಿ ಇಕ್ಬಾಲ್ ಅಹಮದ್, ಮೊದಲಾದವರು ಉಪಸ್ಥಿತರಿದ್ದರು.