ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆಯಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆಯುತ್ತಾರೆ. ಹೀಗಾಗಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮನವಿ ಮಾಡಿದರು.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸುರೇಶ್‌ಬಾಬು ಪರ ಮತಯಾಚಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಶಕ್ತಿ ತುಂಬುತ್ತೇನೆ ಅಂತ ಹೇಳುತ್ತಾರೆ. ಆದರೆ ನುಡಿದಂತೆ ಮೋದಿ ನಡೆಯುವುದಿಲ್ಲ ಎಂದು ಆರೋಪಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ನಾವು. ಈಗಾಗಲೇ ನಾನು ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡುವಂತೆ ಪತ್ರ ಬರೆದಿದ್ದೇನೆ. ಯಾವುದೇ ಒಂದು ಸಮಾಜಕ್ಕೆ ದೇವೇಗೌಡರಿಂದ ಅನ್ಯಾಯವಾಗಿಲ್ಲ ಎಂದು ಹೇಳಿದರು.
ಸ್ತ್ರೀಶಕ್ತಿ ಸಂಘದ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೆ ತಂದರೆ ಕುಮಾರಸ್ವಾಮಿ ನುಡಿದಂತೆ ನಡೆಯುತ್ತಾರೆ ಎಂದರು.
ದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಎಂದರೆ ಅದು ಕುಮಾರಸ್ವಾಮಿ ಎಂದ ಅವರು, ರೈತರಿಗೆ 5 ಸಾವಿರ ಮಾಸಾಶನ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆಲ್ಲ ರಾಜ್ಯದ ಜನತೆ ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಪ್ರತಿ ಹಳ್ಳಿಗೆ ಶುದ್ಧ ನೀರು ಒದಗಿಸುವ ಗುರಿಯನ್ನು ಜೆಡಿಎಸ್ ಪಕ್ಷ ಹೊಂದಿದೆ. ರಾಷ್ಟ್ರದಲ್ಲಿರುವ ಕುಡಿಯುವ ನೀರಿನ ಸಮಸ್ಯೆ, ನದಿ, ಉಪನದಿಗಳ ಮಾಹಿತಿಯನ್ನು ಕುಮಾರಸ್ವಾಮಿ ಸಂಗ್ರಹ ಮಾಡಿದ್ದಾರೆ ಎಂದರು.
ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದು ಯಾರು, ಈದ್ಗಾ ಮೈದಾನ ಸಮಸ್ಯೆ ಬಗೆಹರಿಸಿದ್ದು ಯಾರು ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಹೆಸರೆತ್ತಿ ಮಾತನಾಡಲು ನಾನು ಬಯಸಲ್ಲ. ಬಿಜೆಪಿಯವರು ಮೀಸಲಾತಿ ತೆಗೆಯುತ್ತೇವೆ ಅಂತಾರೆ. ಇದಕ್ಕೆ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ತಕ್ಷಣ ಮುಸ್ಲಿಂರ ಮೀಸಲಾತಿ ವಾಪಸ್ ಕೊಡ್ತೀವಿ ಎಂದು ಹೇಳಿದ್ದಾರೆ ಎಂದರು.


