ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.
ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ-ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ಪರಮೇಶ್ವರ್ ಅವರ ನೇತೃತ್ವದ ಸಮಿತಿ ಅತ್ಯುತ್ತಮ ಪ್ರಣಾಳಿಕೆ ತಯಾರು ಮಾಡಿದ್ದು, ಇದು ಜನರಿಗೆ ನಿರಾಳತೆ ನೀಡಲಿದೆ. ಕಾಂಗ್ರೆಸ್ ನುಡಿದಂತೆ ನಡೆಯುತ್ತಾ ಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ನಾವು 165 ಭರವಸೆಗಳನ್ನು ನೀಡಿ 158 ಭರವಸೆ ಈಡೇರಿಸಿದ್ದೇವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಮ್ಮ ಪ್ರಣಾಳಿಕೆ ಜಾರಿ ಮಾಡಲು ಪ್ರಾಮಾಣಿಕತೆ ತೋರಲಿಲ್ಲ. ಈಗ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ 200 ಯುನಿಟ್ ವಿದ್ಯುತ್ ಉಚಿತ, ಯುವನಿಧಿ ಮೂಲಕ ಪದವೀಧರರಿಗೆ 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ಮಾಸಿಕ ನಿರುದ್ಯೋಗ ಭತ್ಯೆ. ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆ ಹಾಗೂ ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ತುಂಬುತ್ತಿಲ್ಲ. ಹೀಗಾಗಿ ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಿದ್ದೇವೆ.
ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತ. ಗೃಹಲಕ್ಷ್ಮಿ ಯೋಜನೆ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ತಿಂಗಳು ಮನೆಯೊಡತಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಪ್ರೋತ್ಸಾಹ ಧನ. ಇನ್ನು ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ. ಇದನ್ನು ನಾವು ಖಂಡಿತವಾಗಿ ಜಾರಿ ಮಾಡುತ್ತೇವೆ ಎಂದು ನಾನು ಗ್ಯಾರಂಟಿ ನೀಡುತ್ತೇನೆ. ಇದನ್ನು ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಲಾಗುವುದು ಎಂದು ಹೇಳಿದರು.
ಇದರ ಜತೆಗೆ ನಮ್ಮ ಸರ್ಕಾರ ಇದ್ದಾಗ ಅನೇಕ ಕಲ್ಯಾಣಕಾರಿ ಯೋಜನೆ ಕೈಗೊಂಡಿದ್ದೇವೆ. SCP TSP ಕಾಯ್ದೆ ಮಾಡಿದ್ದು, ಬಿಜೆಪಿ ಸರ್ಕಾರ ಅದನ್ನು ಸರಿಯಾಗಿ ಪಾಲಿಸಿಲ್ಲ. ನಮ್ಮ ಸರ್ಕಾರ ಇದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತೇವೆ. ನಮ್ಮ ಈ ಯೋಜನೆಗಳನ್ನು ಜನರು ಮೆಚ್ಚಿದ್ದಾರೆ ಎಂದರು.
ನನಗೆ ಬೇರೆ ರಾಜ್ಯಗಳಿಂದ ದೂರವಾಣಿ ಕರೆ ಹಾಗೂ ಪತ್ರ ಬರುತ್ತಿದ್ದು, ನಿಮ್ಮ ಗ್ಯಾರಂಟಿ ಕಾರ್ಡ್ ಹೆಚ್ಚು ಪರಿಣಾಮಕಾರಿಯಾಗಿದ್ದು, ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ. ನಾವು ಟೊಳ್ಳು ಭರವಸೆ ನೀಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂರುವುದು ನಿಶ್ಚಿತ, ನಮ್ಮ 150 ಕ್ಷೇತ್ರಗಳ ಗುರಿ ತಲುಪುತ್ತೇವೆ ಎಂದು ಹೇಳಿದರು.
ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೋಪಯೋಗಿ, ನೀರಾವರಿ, ಇಂಧನ, ನಗರಾಭಿವೃದ್ಧಿ ಇಲಾಖೆ ಟೆಂಡರ್ ನಲ್ಲಿ ಅಕ್ರಮ ಮಾಡುವ ಹಿನ್ನೆಲೆಯಲ್ಲಿ ಪಾರದರ್ಶಕ ಕಾನೂನು ತರಲು ತೀರ್ಮಾನಿಸಲಾಗಿದೆ. ಬಹುಮಹಡಿ ಸಂಕೀರ್ಣ ಮಾಲೀಕರು ಆಸ್ತಿ ವರ್ಗಾವಣೆ ಕುರಿತ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದು, ಇದಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿ ಮಾಡಲಾಗುವುದು. ರಾಯ್ ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಎಂಎಸ್ ಪಿ ಕುರಿತಂತೆ ಪ್ರಸ್ತಾವ ಮಾಡಲಾಗಿತ್ತು. ಹೀಗಾಗಿ ಕೃಷಿ ಉಇತ್ಪನ್ನ ಬೆಲೆ ನಿಗದಿ ಆಯೋಗ ವರದಿ ಹಾಗೂಬೆಂಬಲ ಬೆಲೆ ಜಾರಿ. ನಾವು ಕೃಷಿ ಬೆಲೆ ಆಯೋಗ ಸ್ಥಾಪಿಸುತ್ತೇವೆ ಎಂದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ರದ್ದು ಮಾಡಿ ರೈತರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದು. ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆ ತಿದ್ದುಪಡಿ ಮಾಡುತ್ತೇವೆ. ಹಾಲಿಗೆ ನೀಡಲಾಗುತ್ತಿದ್ದ ಹಾಲಿನ ಸಬ್ಸಿಡಿಯನ್ನು ಪ್ರತಿ ಲೀಟರ್ ಗೆ 5ರಿಂದ 7 ರೂ.ಗೆ ಹೆಚ್ಚಳ ಮಾಡಿದ್ದೇವೆ.
ಮೀನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ತರಲು ಇದರಲ್ಲಿ 12 ಸಾವಿರ ಕೋಟಿಯ ನೀಲ ಆರ್ಥಿಕತೆ ನಿರ್ಮಿಸಲು ಮತ್ಸ್ಯ ಕ್ರಾಂತಿ ಎಂಬ ಯೋಜನೆ ಮಾಡಲಾಗಿದೆ. ಇದಕ್ಕಾಗಿ 5 ಸಾವಿರ ಕೋಟಿ ಮೀಸಲು. ನೀರಾವರಿ ಯೋಜನೆಗಳಲ್ಲಿ ಒಟ್ಟು 5 ವರ್ಷಗಳಲ್ಲಿ 1.5 ಲಕ್ಷ ಕೋಟಿ ಮೀಸಲಿಟ್ಟು, ಮೇಕೆದಾಟಿಗೆ 9 ಸಾವಿರ ಕೋಟಿ, ಮಹದಾಯಿ ಯೋಜನೆಗೆ 3 ಸಾವಿರ ಕೋಟಿ, ಕೃಷ್ಣಾ ಮೇಲ್ದಂಡೆ, ಆಲಮಟ್ಟಿ, ಭದ್ರ ಮೇಲ್ದಂಡೆ, ವರಾಹಿ, ಎತ್ತಿನಹೊಳೆ ಯೋಜನೆಗೆ ಹಣ ನೀಡಲಾಗುವುದು. ಎತ್ತಿನಹೊಳೆ ಯೋಜನೆ 2 ವರ್ಷಗಳಲ್ಲಿ ಪೂರ್ಣಗೊಳಿಸುತ್ತೇವೆ. ಗಡಿ ಭಾಗ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲಿಡಲು ನಿರ್ಧಾರ. ಉಡುಪಿಯ ಸರ್ಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಉತ್ತೇಜನ. ಎಂಎಸ್ ಎಂಇ ಗಳ ನಿರ್ಲಕ್ಷ್ಯ ಹಾಗೂ ಸಮಸ್ಯೆಗೆ ಪರಿಹಾರ ನೀಡಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು 1 ಸಾವಿರ ಕೋಟಿ.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ, ವಕ್ತಾರ ಗೌರವ್ ವಲ್ಲಭ್, ಪ್ರೊ. ರಾಜೀವ್ ಗೌಡ, ಪ್ರೊ ಕೆ ಈ ರಾಧಾಕೃಷ್ಣ, ಮತ್ತಿತರರು ಉಪಸ್ಥಿತರಿದ್ದರು.