ನನ್ನನ್ನು ಬೆಳಸಿದವರು ನೀವು. ನನ್ನನ್ನು ಉಳಿಸಿಕೊಳ್ಳುವವರು ನೀವು. ನಾನು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ನನ್ನ ಸಾವಾದರೆ, ನನ್ನನ್ನು ಶಿಗ್ಗಾವಿಯಲ್ಲೇ ಮಣ್ಣು ಮಾಡಬೇಕು. ಇದು ನನ್ನ ಶಿಗ್ಗಾವಿಯ ಭೂಮಿ ತಾಯಿಯ ಮಣ್ಣಿನ ಋಣ ತೀರಿಸುವಂತದ್ದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅದ್ಯಾವ ಜನ್ಮದ ಸಂಬಂಧವೊ ಯಾವ ಋಣಾನುಬಂಧವೊ ನೀವು ಹದಿನೈದು ವರ್ಷ ಸತತ ಬೆಂಬಲ ನೀಡಿದ್ದೀರಿ, ನಮ್ಮ ನಿಮ್ಮ ನಡುವೆ ಯಾವುದೇ ಶಕ್ತಿ ಅಡ್ಡಿ ಬರುವುದಿಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ತಲೆ ಬಾಗಿ, ನನ್ನ ಕೊನೆ ಉಸಿರು ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂಬ ಪ್ರತಿಜ್ಞೆ ಮಾಡುತ್ತೇನೆ ಎಂದರು.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಳ್ಳಿಯಿಂದ ಹೊಲಗಳಿಗೆ ಹೋಗುವ 2 ಸಾವಿರ ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ ಮಾಡಿದ್ದೇವೆ. 15 ವರ್ಷಗಳಲ್ಲಿ ಮಾರು 10 ಸಾವಿರ ಬಡವರಿಗೆ ಮನೆ ನಿರ್ಮಾಣ ಮಾಡಿದ್ದೆವೆ. ಮಳೆಯಿಂದ ಹಾನಿಗೊಳಗಾದ ಜನರಿಗೆ 12 ಸಾವಿರ ಮನೆಗಳನ್ನು ಕಟ್ಟಿರುವ ದಾಖಲೆಯನ್ನು ಮಾಡಿದ್ದೇವೆ ಎಂದು ಹೇಳಿದರು.
ಶಿಗ್ಗಾವಿ, ಸವಣೂರು, ಬಂಕಾಪುರದಲ್ಲಿ 6 ಸಾವಿರ ಮನೆ ನಿರ್ಮಾಣ ಮಾಡಿದ್ದೇವೆ. ನಗರಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡಿದ್ದೇವೆ. ಪ್ರತಿಯೊಂದು ಗ್ರಾಮಕ್ಕೆ ಇನ್ನು ಆರು ತಿಂಗಳಲ್ಲಿ ಪ್ರತಿಯೊಂದು ಮನೆಗೆ ನಳದಿಂದ ನೀರು ಕೊಡುವಂತಹ ವ್ಯವಸ್ಥೆ ನಮ್ಮ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಆಗುತ್ತಿದೆ. ನಮ್ಮ ಪ್ರಧಾನಿ ಮೋದಿ, ನಡ್ಡಾ ಅವರ ನೇತೃತ್ವದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಹಳ್ಳಿ ಹಳ್ಳಿಯ ಪ್ರತಿ ಮನೆಗೂ ನಲ್ಲಿ ನೀರು ಕೊಡಲಾಗುತ್ತಿದೆ ಎಂದರು.
ನಾನು ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುತ್ತೇನೆ ಎಂದು ಕೇಳಿದರು. ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಏನೇ ಆದರೂ ನನ್ನ ಜನರ ಮುಂದೆ ತೀರ್ಮಾನ ಆಗಬೇಕು. ನೀವೇ ನನ್ನ ಮಾಲೀಕರು, ನಾನು ಕ್ಷೇತ್ರ ಬಿಟ್ಟು ದಾವಣಗೆರೆಗೆ ಹೋಗುತ್ತೆನೆ. ಎಂದು ಹಬ್ಬಿಸಿದ್ದರು. ಯಾವ ನನ್ನ ಮಗ ಹೇಳಿದ್ದು ಎಂದು ಕೇಳಿದೆ. ಇದು ನನ್ನ ಆತ್ಮಸ್ಥೈರ್ಯ. ಕರ್ನಾಟಕ ಮಾತೆಗೆ, ಕನ್ನಡಿಗರಿಗೆ ಮತ್ತು ಈ ಕ್ಷೇತ್ರದ ಜನರಿಗೆ ನಾನು ಪ್ರಾಮಾಣಿಕ ಸೇವೆಯನ್ನು ಮಾಡಿದ್ದೇನೆ. ಅದರಲ್ಲಿ ನನ್ನ ನಂಬಿಕೆಯಿದೆ ಎಂದು ಹೇಳಿದರು.