ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಭಾರತೀಯ ಜನತಾ ಪಕ್ಷವನ್ನು ತೊರೆದು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಆಗಮಿಸಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಕಾಂಗ್ರೆಸ್ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಶಾಲು ಹೊದಿಸಿ ಬಾವುಟ ನೀಡಿ ಬರಮಾಡಿಕೊಂಡರು.
ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ ಅವರು, ಕಾಂಗ್ರೆಸ್ ಪಕ್ಷದ ಸಿದ್ದಾಂತ ಶೆಟ್ಟರ್ ಗೆ ಗೊತ್ತಿದೆ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿದ, ತಮ್ಮ ಸ್ವಾಭಿಮಾನ ಕಾಪಾಡಲು ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಅವರು ಗೆಲ್ಲುವ ಜೊತೆಗೆ, ಶೆಟ್ಟರ್ ಪಕ್ಷಕ್ಕೆ ಬರುವುದರಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಶಕ್ತಿ ಸಿಗಲಿದೆ ಎಂದು ಹೇಳಿದರು.
150 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ಸಿದ್ದರಾಮಯ್ಯ
ಜಗದೀಶ್ ಶೆಟ್ಟರ್ ಅವರು ಆರ್ ಎಸ್ಎಸ್ ನಿಂದ ಬಂದಿದ್ದರೂ ಜಾತ್ಯತೀತ ತತ್ವದ ಮೇಲೆಯೇ ಕೆಲಸ ಮಾಡಿದ್ದಾರೆ. ನಾನು ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿರೋಧ ಪಕ್ಷದ ನಾಯಕನಾಗಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಎಂದಿಗೂ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಭೇಟಿ ಮಾಡಿದವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಯಾವುದೇ ಕಾರಣ ಇಲ್ಲದೇ, ಆರೋಪವಿಲ್ಲದೆ, ಬಿಜೆಪಿಯವರು ಅವರಿಗೆ ಟಿಕೆಟ್ ವಂಚಿಸಿದ್ದಾರೆ. ಇದು ದುರುದ್ದೇಶ ಎಂದು ಎಲ್ಲರಿಗೂ ಅರ್ಥವಾಗುತ್ತದೆ. ನಾನು ನೋಡಿದಾಗೆ ಶೆಟ್ಟರ್ ಅವರು ರಾಜ್ಯದ ರಾಜಕಾರಣಿಗಳಲ್ಲಿ ಸ್ವಾಭಿಮಾನಿ ರಾಜಕಾರಣಿ. ಅವರು ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿಲ್ಲ. ಈಗ ಅವರ ಸ್ವಾಭಿಮಾನ, ಸಮುದಾಯಕ್ಕೆ ಧಕ್ಕೆಯಾಗಿದೆ. ಅವರ ಅನುಯಾಯಿ, ಸ್ನೇಹಿತರಿಗೆ ಧಕ್ಕೆಯಾಗಿದೆ. ಇದು ಸಹಿಸಲಾಗದ ಅಪಮಾನ. ನಾನು ಕೂಡ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಇಂತಹ ಅನ್ಯಾಯವಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಅವರನ್ನು ಭೇಟಿಯಾದಾಗ ಹೇಳಿದೆ.
ಈ ರೀತಿ ಏಕಾಏಕಿ, ಯಾವುದೇ ಮುನ್ಸೂಚನೆ ಇಲ್ಲದೆ ಟಿಕೆಟ್ ತಪ್ಪಿಸಿರುವುದು ಘೋರ ಅಪರಾಧ. ಅವರು ತಮ್ಮ ಸ್ವಾಭಿಮಾನ ರಕ್ಷಣೆಗೆ ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ಅವರು ಎಲ್ಲರ ಜತೆ ಚರ್ಚಿಸಿ ಅಳೆದು ತೂಗಿ ಇದನ್ನು ಸವಾಲು ಎಂದು ಸ್ವೀಕರಿಸಿ ಅಂತಿಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಅವರು ಪಕ್ಷ ಸೇರುತ್ತಿದ್ದಾರೆ. ನಾವೆಲ್ಲರೂ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು ಭರವಸೆ ನೀಡಿದರು.
ಅಮರ ಸಿಂಗ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದು, ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಶೆಟ್ಟರ್ ಅವರ ಆಗಮನದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಅವರ ಸೇರ್ಪಡೆಯಿಂದ ಕಾಂಗ್ರೆಸ್ 150ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.