ಜಗದೀಶ್ ಶೆಟ್ಟರ್ ಅವರು ರಾಜೀನಾಮೆ ನೀಡಿರುವುದು ನೋವು ಹಾಗೂ ಕಸಿವಿಸಿ ಉಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಈ ಭಾಗದ ಹಿರಿಯ ಹಾಗೂ ಪ್ರಮುಖ ನಾಯಕರು. ಪಕ್ಷವು ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯ ಮಾಡಿದೆ. ನಾನು ಅವರ ವಿರುದ್ದ ಸ್ಪರ್ಧೆ ಮಾಡಿದ್ದೆ. ಮೋದಿ ನೇತೃತ್ವದಲ್ಲಿ ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕೆ.ಎಸ್. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶೆಟ್ಟರ್ ಅವರಿಗೆ ದೆಹಲಿ ಮಟ್ಟದಲ್ಲಿ ಇದಕ್ಕಿಂತ ದೊಡ್ಡ ಹುದ್ದೆ ಕೊಡಲಾಗುವುದು ಎಂದು ಜೆ.ಪಿ.ನಡ್ಡಾ, ಅಮಿತ್ ಶಾ ಅವರು ತಿಳಿಸಿದ್ದರು ಎಂದರು.
ನಿನ್ನೆಯೂ ಚರ್ಚೆ ಮಾಡಿ, ಅವರು ಹೇಳಿರೋರಿಗೆ ಟಿಕೆಟ್ ಕೊಡಲಾಗುವುದು ಎಂದು ತಿಳಿಸಲಾಯಿತು. ಜಗದೀಶ್ ಶೆಟ್ಟರ್ ಅವರು ಮುಂದುವರಿಸಿಕೊಂಡು ಹೋಗಿದ್ದರೆ ಉತ್ತಮವಾಗಿತ್ತು ಎಂದರು.
ಯಡಿಯೂರಪ್ಪ ನಮಗೆ ಆದರ್ಶರು, ಮುಖ್ಯಮಂತ್ರಿ ಇರೋವಾಗಲೇ ರಾಜಿನಾಮೆ ಕೊಟ್ಟಿದ್ದಾರೆ. ನಮಗೆಲ್ಲ ಪಕ್ಷದ ಆದರ್ಶ ಹೇಳಿಕೊಟ್ಟವರು. ಭಾರತೀಯ ಜನತಾ ಪಕ್ಷ ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದುಕೊಂಡು ಹೋಗೋ ಪ್ರಯತ್ನ ನಡೆಸಿದೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಯಡಿಯೂರಪ್ಪ ನೇತೃತ್ವದಲ್ಲಿ ಮೊದಲನೇ ಪೀಳಿಗೆ ಬೆಳದು ನಿಂತಿದೆ. ಎರಡನೆ ಪೀಳಿಗೆಯಲ್ಲಿ ಲಿಂಗಾಯತ ಸಮುದಾಯದ ಸಿ.ಸಿ ಪಾಟೀಲ್, ನಿರಾಣಿ, ಸೋಮಣ್ಣ ಬೆಳೆದು ನಿಂತಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಅತೀ ಹೆಚ್ಚು ಸ್ಥಾನ, ಅತೀ ಹೆಚ್ಚು ಮಂತ್ರಿ ಸ್ಥಾನ, ನೀಡಿದ್ದು ಬಿಜೆಪಿ ಎಂದರು.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ಇಬ್ಬರಿದ್ದಾರೆ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಹೆಸರು ಇದೆ. ನಮ್ಮ ಚುನಾವಣೆ ತಂತ್ರ ನಾವು ರೂಪಿಸುತ್ತೇವೆ. ಪಕ್ಷ ಗೆಲ್ಲಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲರಿಗೂ ಅವಕಾಶ ಕೊಡಲಾಗಿದೆ.ನಿನ್ನೆ ಸ್ವತಃ ಅಮಿತ್ ಶಾ ಅವರು ಶೆಟ್ಟರ್ ಜೊತೆ ಮಾತಾಡಿದ್ದಾರೆ. ರಾಜ್ಯ, ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಅವರ ಹೆಸರು ಇತ್ತು. ಇದು ಮೇಲಿನವರ ತೀರ್ಮಾನ ಎಂದು ತಿಳಿಸಿದ ಮುಖ್ಯಮಂತ್ರಿಗಳು ಬದಲಾವಣೆ ತರುವಂತಹ ಕಾಲ ಇದು ಎಂದರು.
ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು. ಅದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಟಿಕೆಟ್ ತಪ್ಪಿದೆ. ಅವರ ಎಲ್ಲಾ ಪ್ರಶ್ನೆಗೆ ನಾನು ಉತ್ತರ ನೀಡುವುದಿಲ್ಲ ಎಂದರು.
ಹೊಸ ಬೆಳವಣಿಗಾಗಿ ಈ ಪ್ರಯತ್ನ ಎಂದ. ಶೆಟ್ಟರ್ ರಾಜಿನಾಮೆಯಿಂದ ಬಿಜೆಪಿಗೆ ಸ್ವಲ್ಪ ಹಾನಿಯಾಗಲಿದೆ. ಡ್ಯಾಮೇಜ್ ಕಂಟ್ರೋಲ್‌ಗೆ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು.