ಕಾಂಗ್ರೆಸ್ ಎನ್ನುವುದು ಜೈಲು. ಅದರಲ್ಲಿ ನಾನು 40 ವರ್ಷ ಜೈಲಿನಲ್ಲಿದ್ದಂತೆ ಇದ್ದೆ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ತುಮಕೂರಿನ ಶಕ್ತಿಸೌಧದಲ್ಲಿ ಮಾತನಾಡಿದ ಅವರು ನಾನು ರಾಜಕೀಯಕ್ಕೆ ಬರುವಾಗ ಬಿಜೆಪಿ ಇರಲಿಲ್ಲ. ಕಾಂಗ್ರೆಸ್ ಅಧಿಕಾರ ಮಾಡುತ್ತಿತ್ತು. ದಾರಿ ತಪ್ಪಿ ಹೋಗಿ ಸೇರಿದ ಮೇಲೆಯೇ ಗೊತ್ತಾಗಿದ್ದು, ಅದು ಸುಡುವ ಮನೆ ಎಂದು. ಅಂಬೇಡ್ಕರ್ ಸಹ ಕಾಂಗ್ರೆಸ್ ಗೆ ದಲಿತರು ಹೋಗಬಾರದು, ಬೆಂಬಲಿಸಬಾರದು ಎಂದು ಹೇಳಿದ್ದನ್ನು ಹಿರಿಯರು ಯಾರೂ ಹೇಳಲಿಲ್ಲ ಎಂದು ತಿಳಿಸಿದರು.
ನಾನು ದಾರಿ ತಪ್ಪಿ 40 ವರ್ಷ ಕಾಂಗ್ರೆಸ್ ನಲ್ಲಿದ್ದೆ. ಬರೀ ಓಟ್ ಬ್ಯಾಂಕ್ ಮಾಡಿಕೊಳ್ಳುವುದೇ ಹೊರತು ಕಾಂಗ್ರೆಸ್ ಏನೂ ಮಾಡಲಿಲ್ಲ. ಮೂಗಿಗೆ ತುಪ್ಪ ಸವರುವುದನ್ನು ಬಿಟ್ಟು ಏನೂ ಮಾಡಲಿಲ್ಲ. ನಮಗೆ ಅದನ್ನು ನೆಕ್ಕೋದಕ್ಕೂ ಆಗಲ್ಲ. ಸುಮ್ಮನೆ ಇರೋಕು ಆಗಲ್ಲ ಎನ್ನುವ ಸ್ಥಿತಿ ದಲಿತರಿಗೆ ಇದೆ ಎಂದು ಹೇಳಿದರು.
ಜನತಾದಳ ದಲಿತರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ, ನೂರೋ, ಇನ್ನೂರೋ ಕೊಟ್ಟರೆ ವೋಟು ಹಾಕುತ್ತಾರೆ ಎಂದು ಭಾವಿಸಿದ್ದಾರೆ. ಛಲವಾದಿಗಳು ಪ್ರೀತಿ, ವಿಶ್ವಾಸಕ್ಕೆ ಸೋಲುತ್ತಾರೆಯೇ ಹೊರತು ಹಣಕ್ಕಲ್ಲ ಎನ್ನುವುದನ್ನು ತೋರಿಸಬೇಕು ಎಂದು ತಿಳಿಸಿದರು.