ಪ್ರಾಜೆಕ್ಟ್ ಟೈಗರ್’ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಫಾರಿ ಡ್ರೆಸ್ ತೊಟ್ಟು ಬಂಡೀಪುರದ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಮೈಸೂರಿಗೆ ಬಂದಿದ್ದು, ಏಪ್ರಿಲ್ 9ರಂದು ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬಂಡೀಪುರದ ಹುಲಿ ರಕ್ಷಿತಾರಣ್ಯದಲ್ಲಿ ಸಫಾರಿ ಮಾಡಿದರು.
ಉದ್ಯಾನದಲ್ಲಿ ಸುಮಾರು 22 ಕಿ.ಮೀ ಸಫಾರಿ ಮಾಡಿದರೂ ಸಹ ಒಂದೇ ಒಂದು ಹುಲಿ ಕಂಡಿಲ್ಲ ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಹೊಸ ಹುಲಿ ಗಣತಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದ್ದಾರೆ. ಹೊಸ ಹುಲಿ ಗಣತಿ ಮಾಹಿತಿ ಪ್ರಕಾರ ದೇಶದಲ್ಲಿ 3,167 ಹುಲಿಗಳು ಇವೆ ಎಂದು ಹೇಳಲಾಗಿದೆ.
2006ರಲ್ಲಿ 1,411 ಹುಲಿಗಳಿದ್ದರೆ, 2010ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967 ಮತ್ತು 2022ರಲ್ಲಿ 3,167 ಹುಲಿಗಳಿರುವುದಾಗಿ ಮಾಹಿತಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಮುಂದಿನ 25 ವರ್ಷಗಳ ಹುಲಿ ಸಂರಕ್ಷಣೆಯ ದೂರದೃಷ್ಟಿಯುಳ್ಳ ಅಮೃತ ಮಹೋತ್ಸವದ ಹುಲಿ ವಿಷನ್ ಕಿರುಹೊತ್ತಗೆಯನ್ನು ಮೋದಿ ಬಿಡುಗಡೆ ಮಾಡಿದರು.