ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರ ಬೆಂಗಳೂರಿನ ನಿವಾಸ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಚಾಮರಾಜಪೇಟೆ ಮತ್ತು ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮತ್ತು ಅವರ ಒಡೆತನದ ಪ್ಲಾಟ್ ಹಾಗು ಶಿವಾಜಿ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಮನೆಯ ಮೇಲೆ ದಾಳಿ ನಡೆದಿದೆ.
ಗುರುವಾರ ಮುಂಜಾನೆ 6 ಗಂಟೆಗೆ ಏಕಕಾಲದಲ್ಲಿ ಮನೆ, ಪ್ಲಾಟ್ ಮತ್ತು ಟ್ರಾವೆಲ್ ಕಚೇರಿಯ ಮೇಲೆ ದಾಳಿ ನಡೆಸಲಾಗಿದ್ದು ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಇಡಿ ದಾಳಿ ರಾಜಕೀಯ ಪ್ರೇರಿತ, ಸೇಡಿನ ಕ್ರಮ: ಕಾಂಗ್ರೆಸ್
ಜಮೀನ್ ಮನೆ ಮತ್ತು ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಇದೊಂದು ರಾಜಕೀಯ ಪ್ರೇರಿತ ದಾಳಿ, ಸೇಡಿನ ಕ್ರಮವಾಗಿದೆ ಎಂದು ಟೀಕಿಸಿದೆ.
ಮಾಜಿ ಸಚಿವರಾದ ಜಮೀರ್ ಅಹಮದ್ ಅವರ ಮನೆಯ ಮೇಲಿನ ರಾಜಕೀಯ ಪ್ರೇರಿತ ಇಡಿ ದಾಳಿಯನ್ನು ಖಂಡಿಸುತ್ತೇನೆ. ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಧ್ಯಮಗಳ ಮುಂದೆ ಮಾತನಾಡಿ ಜಮೀರ್ ಅವರಿಗೆ ಕೇಂದ್ರ ಸರ್ಕಾರ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ. ಅವರು ಇಡಿಗೆ ಸಹಕರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದಾಳಿ ಅನಗತ್ಯವಾಗಿತ್ತು ಎಂದು ಹೇಳಿದ್ದಾರೆ.