Thursday, November 21, 2024
Google search engine
Homeರಾಜಕೀಯಸಚಿವೆ ವಂಚಿತ ಶಾಸಕಿ ಪೂರ್ಣಿಮಾ ಕಿಡಿಕಿಡಿ

ಸಚಿವೆ ವಂಚಿತ ಶಾಸಕಿ ಪೂರ್ಣಿಮಾ ಕಿಡಿಕಿಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿರುವುದಕ್ಕೆ ಹಿರಿಯೂರು ಶಾಸಕ ಪೂರ್ಣಿಮಾ ಕೃಷ್ಣಪ್ಪ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಮೂಲಕ ನನಗೂ ಮತ್ತು ಚಿತ್ರದುರ್ಗ ಜಿಲ್ಲೆಗೂ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಗೊಲ್ಲ ಸಮುದಾಯದಿಂದ ಸ್ವಂತ ಬಲದಿಂದ ಆಯ್ಕೆಯಾಗಿರುವ ಏಕೈಕ ವಿಧಾನಸಭಾ ಜನಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ನಾನು ಎಂದೂ ಪಕ್ಷಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಯಾವುದೇ ಹಗರಣ ನನ್ನ ಸುತ್ತಿಕೊಂಡಿರಲಿಲ್ಲ. ಆದರೆ ಇಂದು ಪಕ್ಷ ತೆಗೆದುಕೊಂಡಿರುವ ನಿರ್ಧಾರ ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.

ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಪತಿ ಶ್ರೀನಿವಾಸ್ಮ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗಲೂ ನಾನು ಪಕ್ಷನಿಷ್ಠೆ ಬದಲಿಸಲಿಲ್ಲ. ಅಪ್ಪಿತಪ್ಪಿಯೂ ಕೂಡ ನನ್ನ ಯಜಮಾನರ ಪರವಾಗಿ ಪ್ರಚಾರ ಮಾಡಿರಲಿಲ್ಲ ಎಂದು ತಮ್ಮ ನಿಷ್ಠೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಶಿರಾ ಉಪಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಕಳೆದ ಬಸವಕಲ್ಯಾಣ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಕ್ಷೇತ್ರದಲ್ಲಿ ಓಡಾಡಿ ಗೊಲ್ಲ ಸಮುದಾಯದ ಹೆಚ್ಚು ಮತಗಳನ್ನು ಪಕ್ಷಕ್ಕೆ ತಂದಿದ್ದೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಫೇಸ್ ಬುಕ್ ನಲ್ಲಿ ತಮ್ಮಹೇಳಿಕೆಯನ್ನು ಟ್ಯಾಗ್ ಮಾಡಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಲು ಗೊಲ್ಲ ಸಮುದಾಯದ ಮತಗಳು ಹೆಚ್ಚು ನಿರ್ಣಾಯಕವಾಗಿದ್ದವು. ಪಕ್ಷವು ಅದನ್ನೆಲ್ಲ ಮರೆತಿದೆ. ಹಲವು ಜಿಲ್ಲೆಯ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಹಾಗೂ ಇತರೆ ಹಿಂದುಳಿದ ಸಮಾಜಗಳನ್ನು ಸಂಘಟನೆ ಮಾಡಿ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಎಲ್ಲವನ್ನು ಮರೆತು ಪಕ್ಷ ಈಗ ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಗೂಳಿಹಟ್ಟಿ ಶೇಖರ್, ಚಂದ್ರಪ್ಪ ಅವರಂತಹ ಹಿರಿಯ ನಾಯಕರು ಮತ್ತು ಆರು ಬಾರಿ ಗೆದ್ದಿರುವ ತಿಪ್ಪಾರೆಡ್ಡಿ ಅವರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು. ಇದು ಪಕ್ಷವು ನಮ್ಮ ಜಿಲ್ಲೆಗೆ ಮಾಡುತ್ತಿರುವ ಅವಮಾನ ಎಂದು ತಿಳಿಸಿದ್ದಾರೆ.

ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದ ಗೊಲ್ಲ ಸಮುದಾಯವು 80ರಷ್ಟು ಭಾಗವು ಬಿಜೆಪಿಗೆ ಮತ ನೀಡಿಡೆ. ಇದನ್ನು ಪಕ್ಷ ಮರೆಯಬಾರದಿತ್ತು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿದ್ದು, ಒಂದು ಸ್ಥಾನ ನೀಡದೇ ಇರುವುದು ತುಂಬಾ ನೋವುಂಟು ಮಾಡಿದೆ ಎಂದು ನೂತನ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular