ಲೋಕಸಭೆಯಿಂದ ಅನರ್ಹಗೊಂಡ ಕೆಲವೇ ಗಂಟೆಗಳ ನಂತರ ತಾನು ಭಾರತದ ಧ್ವನಿಗಾಗಿ ಯಾವುದೇ ಬೆಲೆ ತೆರಲು ಸಿದ್ದ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ 52ರ ಹರೆಯದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್, ನಾನು ಭಾರತದ ಧ್ವನಿಗಾಗಿ ಹೋರಾಡುತ್ತಿದ್ದೇನೆ. ನಾನು ಯಾವುದೇ ಬೆಲೆ ತೆರಲು ಸಿದ್ದ ಎಂದು ತಿಳಿಸಿದ್ದಾರೆ.
ಅವರ ಅನರ್ಹತೆಯನ್ನು ಘೋಷಿಸಿದ ಲೋಕಸಭೆಯ ಸೆಕ್ರೆಟೆರಿಯೇಟ್ ಅಧಿಸೂಚನೆಯಲ್ಲಿ ಇದು ಮಾರ್ಚ್ 23 ರಿಂದ ಶಿಕ್ಷೆಯ ದಿನದಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ.
ಲೋಕಸಭಾ ಸೆಕ್ರೆಟರಿಯೇಟ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ರಾಹುಲ್ ಗಾಂಧಿ ಅವರನ್ನು ಸೂರತ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದ ನಂತರ 1951ರ ಪ್ರಜಾಪ್ರತಿನಿಧಿ ಕಾಯ್ದೆ 8ನೇ ಪರಿಚ್ಛೇದದೊಂದಿಗೆ ಭಾರತದ ಸಂವಿಧಾನದ 102(1)(ಇ) ವಿಧಿಯ ನಿಬಂಧನೆಗಳ ಪ್ರಕಾರ ಮಾರ್ಚ್ 23 2023 ರಿಂದ ಅವರು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ ಎಂದು ಆದೇಶಿಸಲಾಗಿದೆ. ಈ ಬಗ್ಗೆ ರಾಹುಲ್ ಪ್ರತಿಕ್ರಿಯಿಸಿ ಭಾರತದ ಧ್ವನಿಗಾಗಿ ಬೆಲೆ ತೆರಲು ಸಿದ್ದ ಎಂದಿದ್ದಾರೆ.