ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾಗಿ ಬಿ.ಸುರೇಶಗೌಡ ಮಾಡಿರುವ ಅಭಿವೃದ್ದಿ ಕಾರ್ಯಗಳು ಇಡೀ 224 ಕ್ಷೇತ್ರಗಳಿಗೂ ಮಾದರಿಯಾಗಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶ್ಲಾಘಿಸಿದ್ದಾರೆ.
ತುಮಕೂರು ತಾಲೂಕು ಬಳ್ಳಗೆರೆಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಗ್ರಾಮಗಳಿಗೂ ರಸ್ತೆ ನಿರ್ಮಾಣ ಮಾಡಿದ್ದಾರೆ. ಚರಂಡಿಗಳನ್ನು ಮಾಡಿ ಕ್ಷೇತ್ರವನ್ನು ಮಾದರಿಯಾಗಿದ್ದಾರೆ ಎಂದು ಕೊಂಡಾಡಿದರು.
ಈ ಕ್ಷೇತ್ರದ ಮಾಜಿ ಶಾಸಕರಾದ ಸುರೇಶಗೌಡರು ಕೇಂದ್ರದ ಕೃಷಿ ಇಲಾಖೆಯ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಕೃಷಿ ಮೂಲಭೂತ ಸೌಕರ್ಯ ನಿಧಿಯ ಅಡಿಯಲ್ಲಿ ಕ್ಷೇತ್ರದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೀತಲೀಕರಣ ಘಟಕ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುವಂತಹ ಯೋಜನೆ ರೂಪಿಸಲು ಮನವಿ ಮಾಡಿದ್ದಾರೆ ಎಂದರು.
ಸದಾ ಜನಪರ ಕಾಳಜಿ ಇರುವ ಸುರೇಶ್‌ಗೌಡ ಹಾಗೂ ದೇಶದ ಅಭಿವೃದ್ದಿಗಾಗಿ ದುಡಿಯುತ್ತಿರುವ ಬಿಜೆಪಿ ಪಕ್ಷವನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಹೊನ್ನಾವರ-ಬೆಂಗಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವೆ ಶೋಭಾ ಕರಂದ್ಲಾಜೆ ಕಾರಣ. ಈ ಯೋಜನೆಗೆ ಬಿಎಸ್ ವೈ ಬೆಂಬಲ ನೀಡಿದ್ದರಿಂದ ಇಂದು ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ದೇಶಕ್ಕೆ ಇಂದು ಮೋದಿ ಹಾಗೂ ಬಿಜೆಪಿ ಅನಿವಾರ್ಯವಾಗಿದೆ, ತನ್ನನ್ನು ತಾನೇ ನೋಡಿಕೊಳ್ಳದ ರಾಹುಲ್‌ಗಾಂಧಿಗೆ ದೇಶವನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ಲ. ಹೊರದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವ ಟೀಕಿಸುವ ವ್ಯಕ್ತಿಯಿಂದ ದೇಶವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.