ಬೆಲೆ ಕುಸಿತದಿಂದ ಕಂಗಲಾಗಿರುವ ರೇಷ್ಮೆ ಬೆಳೆಗಾರರಿಂದ ಮಾರ್ಚ್ 14ರಿಂದಲೇ ಸರ್ಕಾರ ಕಚ್ಚಾ ರೇಷ್ಮೆ ಖರೀದಿಸುವಂತೆ ಸೂಚನೆ ನೀಡಲಾಗಿದೆ ಎಂದು ರೇಷ್ಮೆ ಇಲಾಖೆ ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ರೇಷ್ಮೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಡಾ.ನಾರಾಯಣಗೌಡ, ಕಚ್ಛಾ ರೇಷ್ಮೆಗೂಡಿನ ದರ ದಿಢೀರ್ ಕುಸಿತದಿಂದ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ಆಗಬಾರದು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶ ಮಾಡಿ, ರೇಷ್ಮೆ ಬೆಳೆಗಾರರ ಜೊತೆ ನಿಲ್ಲಬೇಕು. ಕೆಎಸ್‌ಎಂಬಿ ಮುಖಾಂತರ ಕಚ್ಚಾ ರೇಷ್ಮೆ ಖರೀದಿ ಮಾಡುವಂತೆ ಸಚಿವರು ಸೂಚಿಸಿದರು.
ದರ ಕಮಿಟಿಯ ಸಭೆ ಕರೆದು, ಮಾರ್ಚ್ 14ರಿಂದಲೇ ಕೆಎಸ್‌ಎಂಬಿ ಮೂಲಕ ಕಚ್ಚಾ ರೇಷ್ಮೆ ಖರೀದಿಗೆ ಚಾಲನೆ ನೀಡಬೇಕು. ರೇಷ್ಮೆ ಗೂಡಿನ ದರ ಮತ್ತೆ ಉತ್ತಮ ಸ್ಥಿತಿಗೆ ತಲುಪಬೇಕು ಎಂದು ತಿಳಿಸಿದರು.
ರೇಷ್ಮೆಗೂಡು ಉತ್ಪಾದನೆಯಲ್ಲಿ ಶೇಕಡಾ 23 ರಷ್ಟು ಹೆಚ್ಚಳ ಕಂಡಿದ್ದು, ಕಳೆದ 15 ದಿನಗಳಿಂದ ಒಮ್ಮೆಲೆ ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಕುಸಿತವಾಗಿರಬಹದು. ಜೊತೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಲೂ ಬೆಲೆ ಕಡಿಮೆಯಾಗಿರಬಹುದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಳೆಯಿಂದಲೇ ಕೆಎಸ್‌ಎಂಬಿ ಮೂಲಕ ಕಚ್ಚಾ ರೇಷ್ಮೆ ಖರೀದಿಗೆ ಸೂಚನೆ ನೀಡಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ರೇಷ್ಮೆ ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು. ಸರ್ಕಾರ ರೇಷ್ಮೆ ಬೆಳೆಗಾರರ ಬೆನ್ನಿಗಿದ್ದು, ಮತ್ತೆ ರೇಷ್ಮೆಗೂಡಿನ ಬೆಲೆ ಉತ್ತಮ ಸ್ಥಿತಿಗೆ ತಲುಪುವಂತೆ ಕ್ರಮಕೈಗೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಡ್ಲಘಟ್ಟ ಭಾಗದಲ್ಲಿ 15 ದಿನ ಕಳೆದರೂ ರೇಷ್ಮೆ ಹುಳುಗಳು ಹಣ್ಣಾಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಸಚಿವ ಡಾ.ನಾರಾಯಣಗೌಡ, ಕೂಡಲೇ ರೇಷ್ಮೆ ಇಲಾಖೆಯ ವಿಜ್ಞಾನಿಗಳು ಭೇಟಿ ನೀಡಿ ನಿಖರ ಕಾರಣದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ರೇಷ್ಮೆ ಇಲಾಖೆ ಆಯುಕ್ತ ರಾಜೇಶ್ ಗೌಡ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಇತರರು ಇದ್ದರು.