Friday, September 20, 2024
Google search engine
Homeಮುಖಪುಟಕನ್ನಡ ಸಾಹಿತ್ಯ ಪರಿಷತ್ತು ಹೀಗೇಕೆ ಮಾಡುತ್ತಿದೆ?

ಕನ್ನಡ ಸಾಹಿತ್ಯ ಪರಿಷತ್ತು ಹೀಗೇಕೆ ಮಾಡುತ್ತಿದೆ?

ಸಾಹಿತ್ಯ ಸಮ್ಮೇಳನದಲ್ಲಿ ವಸತಿ ಸಮಸ್ಯೆ ಕುರಿತು ಪ್ರಶ್ನಿಸಿದರೆಂಬ ಕಾರಣಕ್ಕೆ ದೂರದರ್ಶನದ ಹಿರಿಯ ಅಧಿಕಾರಿ ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿರುವ ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮಹೇಶ್ ಜೋಶಿಯ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹಿರಿಯ ಸಾಹಿತಿ ಹಾಗೂ ಕಸಾಪ ಸದಸ್ಯ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿರುವ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ದೂರದರ್ಶನದ ಹಿರಿಯ ಅಧಿಕಾರಿಗಳಾದ ಶ್ರೀಮತಿ ನಿರ್ಮಲಾ ಎಲಿಗಾರ್ ಅವರು ಹಾವೇರಿ ಸಮ್ಮೇಳನದಲ್ಲಿ ತಮಗಾದ ತೊಂದರೆಗಳನ್ನು ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿರುವುದನ್ನು ನಾನು ಸಾಮಾಜಿಕ ಮಾಧ್ಯಮಗಳಲ್ಲ ಗಮನಿಸಿದ್ದೇನೆ. ಅದು ಪ್ರಜಾಪ್ರಭುತ್ವ ನಮಗೆ ಕೊಟ್ಟಿರುವ ಹಕ್ಕು. ಇದನ್ನು ಉಪಯೋಗಿಸಿಕೊಂಡು ನಾವು ಹಲವರು ನಮ್ಮದೇ ರೀತಿಯಲ್ಲಿ ಪ್ರತಿಭಟಿಸಿದ್ದೇವೆ. ಅವೆಲ್ಲವೂ ಪರಿಷತ್ತಿನ ಅಧ್ಯಕ್ಷರ ಗಮನಕ್ಕೆ ಬಂದಿದೆ, ಮಾತ್ರವಲ್ಲ, ಸುಮಾರು 15 ವರ್ಷಗಳಿಂದ ವೈಯಕ್ತಿಕವಾಗಿ ಗೊತ್ತಿರುವ ನನ್ನನ್ನು ಅವರು ʼಪೆಂಡಾಲ್‌ ಹಾಕಿಸುವʼ ಮಟ್ಟಕ್ಕೆ ಇಳಿಸಿದ್ದಾರೆ. ಬೌದ್ದಿಕ ಚರ್ಚೆಗಳಲ್ಲಿ ವಿಶ್ವಾಸ ಇರುವ ನಾನು ಅದನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲಿಲ್ಲ.

ಅಧಿಕಾರ ಗೆಳೆತನವನ್ನು ಮರೆಸಿಬಿಡುವುದು ನನಗೇನೂ ಹೊಸತಲ್ಲ. ಆದರೆ ಈಗ ಕಸಾಪವು ಶ್ರೀಮತಿ ನಿರ್ಮಲಾ ಎಲಿಗಾರ್ ಅವರ ಮೇಲೆ ಕ್ರಮ ಕೈಗೊಂಡಿದೆ. ಅವರ ಸದಸ್ಯತ್ವವನ್ನು ಅಮಾನತಿನಲ್ಲಿರಿಸಿದೆ. ಅವರಿಗೆ ನೀಡಲಾದ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಲಾಗಿದೆ. ಇವು ಸರಿಯಾದ ಕ್ರಮಗಳಲ್ಲ. ಕಾರಣ ಕೂಡಲೇ ಅಮಾನತು ಕ್ರಮವನ್ನು ಹಿಂತೆಗೆದುಕೊಳ್ಳಬೇಕಾಗಿ ನಾನು ನನ್ನ ಗೆಳೆಯರಾದ ಕಸಾಪ ಅಧ್ಯಕ್ಷರನ್ನು ಕೋರಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ವಿರುದ್ಧ ಕ.ಸಾ.ಪ.?

ಕಸಾಪ ಆಜೀವ ಸದಸ್ಯ ಸಂಗಮೇಶ್ ಮೆಣಸಿನಕಾಯಿ ಅವರು, ಡಾ.ನಿರ್ಮಲ ಮೇಡಂ, ತಾವು ಹುಬ್ಬಳ್ಳಿಯಲ್ಲಿ ಯುವಜನೋತ್ಸವದ ಕವರೇಜ್‌ಗೆ ಬಂದಾಗ ಹಾವೇರಿ ಸಾಹಿತ್ಯ ಸಮ್ಮೇಳನದ ಘಟನೆಯಿಂದ ಎದುರಿಸಬೇಕಾಗಬಹುದಾದ ಪ್ರತಿಕಾರದ ಬಗ್ಗೆ ತಮಗೆ ಎಚ್ಚರಿಸಿದ್ದೆ, ನೆನಪಿದೆಯಾ? ಆದರೆ ನಾವಂದುಕೊಂಡಂತೆ ಪರೋಕ್ಷ ಸೇಡು ತೀರಿಸಿಕೊಳ್ಳುತ್ತಿಲ್ಲ, ಪ್ರತ್ಯಕ್ಷ ಸೇಡಿಗೇ ಮುಂದಾಗಿದ್ದಾರೆ ನಾಡೋಜರು!

ಅಷ್ಟಕ್ಕೂ ಆಜೀವ ಸದಸ್ಯತ್ವದಿಂದ ಮತ್ತು ಘೋಷಿತ ಪ್ರಶಸ್ತಿಯಿಂದ ಕೈಬಿಡುವಂಥ ತಪ್ಪು ನೀವೇನು ಮಾಡಿದ್ದೀರೋ ನಾನರಿಯೆ. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಘಟನೆ ವೇಳೆ ಹಾಜರಿದ್ದ ನನ್ನ ಆತ್ಮೀಯರು ಹೇಳುವ ಪ್ರಕಾರ ನೀವು ನಿಮಗಾಗಿಯೇ, ಅಂದರೆ ದೂರದರ್ಶನದ ಸಿಬ್ಬಂದಿಗಾಗಿ ಮೀಸಲಾಗಿದ್ದ ಸೌಲಭ್ಯವನ್ನು ಕೇಳಿದ್ದೀರಿ. ಸೂಕ್ತ ಸ್ಪಂದನೆ ಸಿಗದಿದ್ದಾಗ ಏರಿದ ದನಿಯಲ್ಲಿ ಪ್ರಶ್ನಿಸಿದ್ದೀರಿ. ವಿಡಿಯೊ ನೋಡಿದಾಗ ಅವರೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಗೋಚರಿಸುತ್ತದೆ. “ಹಲೋ ಹೌ ಆರ್ ಯೂ….” ಅಂತ ಬೇರೆ ಯಾರಿಗೋ ವಿಶ್ ಮಾಡುತ್ತ ಪಲಾಯನಗೈದಿದ್ದಾರೆ ಎಂದು ಮಹೇಶ್ ಜೋಶಿ ವಿರುದ್ಧ ಕಿಡಿಕಾರಿದ್ದಾರೆ.

ಕ.ಸಾ.ಪ.ಗೆ ಬೇಕಿದೆ ಕಾನೂನು ಸಲಹೆಗಾರ?

ನಿರ್ಮಲಾ ಅವರ ಯಾವ ತಪ್ಪಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಪ್ರಾಥಮಿಕ ಜ್ಞಾನವೂ ಕ.ಸಾ.ಪ.ದಲ್ಲಿ ಇದ್ದಂತಿಲ್ಲ. ಅಂತೆಯೇ ಎರಡು ತಿಂಗಳು ತಲೆ ಕೆರೆದು ಕೊಂಡು ಆಜೀವ ಸದಸ್ಯತ್ವ ಮತ್ತು ಘೋಷಿತ ಪ್ರಶಸ್ತಿಯಿಂದ ಕೈಬಿಟ್ಟು ಸೇಡು ತೀರಿಸಕೊಳ್ಳಲಾಗಿದೆ. ಇದು ಪಕ್ಕಾ ಪುರುಷ ಅಹಂ, ಯಜಮಾನಿಕೆಯ ಬುದ್ಧಿಯೇ ಸರಿ ಎಂದರು.

ಈ ಶಿಕ್ಷೆ ವಿಧಿಸಿರುವ ಕ.ಸಾ.ಪ. ಪದಾಧಿಕಾರಿಗಳಿಗೆ ಒಂದು ಪ್ರಶ್ನೆ. ಸಮ್ಮೇಳನದ ಪೆಂಡಾಲ್ ಹಾಕಲು ಬರುವ ಹುಡುಗ, ಪೆಂಡಾಲ್ ಹಾಕಲು ಸ್ಥಳವೇ ಇಲ್ಲ, ಎಲ್ಲಿ ಹಾಕಲಿ? ಅಂತ ಕೇಳಿದರೆ ಅವನ ಆಜೀವ ಸದಸ್ಯತ್ವ ರದ್ದು ಮಾಡ್ತೀರಾ?

ಈಗ ಅಂಥದೇ ಕೆಲಸ ಮಾಡಿದ್ದೀರಿ. ಕೂಡಲೇ ಸರಿಯಾಗಿ ಓದಿಕೊಂಡಿರುವ ಒಬ್ಬ ಕಾನೂನು ಸಲಹೆಗಾರನನ್ನು ನೇಮಿಸಿಕೊಳ್ಳಿ! ಎಂದು ಗದಗದ ಸಂಗಮೇಶ ಮೆಣಸಿನಕಾಯಿ ಸಲಹೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular