ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಮಿಷನ್ ಪಡೆದಿರುವುದು ಮತ್ತಹ ಅವರ ಮನೆಯಲ್ಲಿ ಸಿಕ್ಕಿ 6 ಕೋಟಿ ಹಣದ ವಿಚಾರವಾಗಿ ತನಿಖೆ ನಡೆಯುತ್ತಿದೆ. ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದಿನ ಕಾಂಗ್ರೆಸ್ ಸರ್ಕಾರದ ರೀತಿ ಅವರನ್ನು ಹಿಡಿಯುವುದು, ಇವರನ್ನು ಬಿಡುವುದು ಎಂಬ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಭ್ರಷ್ಟಾಚಾರದಿಂದ ತಪ್ಪಿಸಿಕೊಳ್ಳಲೆಂದೇ ಸಿದ್ದರಾಮಯ್ಯ ಲೋಕಾಯುಕ್ತ ಡಮ್ಮಿ ಮಾಡಿ ಎಸಿಬಿ ಜಾರಿಗೆ ತಂದರು. ಅಲ್ಲದೆ ತನಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಂಡು ಏನೇನು ಮಾಡಿದರು ಎಂಬುದು ಎಲ್ಲರಿಗು ಗೊತ್ತಿದೆ ಎಂದು ಹೇಳಿದರು.
ನ್ಯಾಯಾಲಯವೇ ಎಸಿಬಿ ರದ್ದು ಮಾಡಿ, ಲೋಕಾಯುಕ್ತವನ್ನು ತಂದಿದೆ. ಲೋಕಾಯುಕ್ತಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡಿದ್ದೇವೆ. ಮಾಡಾಳು ವಿರೂಪಾಕ್ಷಪ್ಪ ಅವರದ್ದು ವೈಯಕ್ತಿಕ ವಿಚಾರ. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಭ್ರಷ್ಟಾಚಾಋದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದರು.
ಅರಸೀಕೆರೆಯಲ್ಲಿ ನಡೆದ ಬೆಂಗಾವಲು ವಾಹನ ಡಿಕ್ಕಿ ಎಂಬ ವಿಚಾರ ಸುಳ್ಳು. ನನಗೆ ಬೆಂಗಾವಲಿಗೆ ಇದ್ದ ಎರಡು ವಾಹನಗಳು ನನ್ನ ಜೊತೆಗೆ ಇವೆ. ಆದರೆ ನಮ್ಮ ಹಿಂದೆ ಬಂದ ಪೊಲೀಸ್ ವಾಹನವೊಂದು ಡಿಕ್ಕಿಯಾಗಿದೆ. ಅವರಿಗೆ ಕಾನೂನು ರೀತಿ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


