ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಸಂತೆಮಾವತ್ತೂರು ಗೊಲ್ಲರಹಟ್ಟಿಯ ಸಾಮಾಜಿಕ ಹೋರಾಟಗಾರ ಜಿ.ಕೆ.ನಾಗಣ್ಣ ಅವರನ್ನು ಕೆಪಿಸಿಸಿಯ ಸಾಮಾಜಿಕ ನ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಸಾಮಾಜಿಕ ನ್ಯಾಯ ಸಮಿತಿಗೆ ಡಾ.ಚಮನ್ ಫರ್ಜಾನ, ಮಾಟಿಲ್ಡಾ ಡಿಸೋಜ, ನಾಗರಾಜ ಎಚ್.ಸಿ., ದರ್ಶನ್ ಬಳ್ಳೇರ, ಮಸ್ತಾನ ಬಿರಾದಾರ ಮತ್ತು ಜಿ.ಕೆ.ನಾಗಣ್ಣ ಸೇರಿದಂತೆ 6 ಮಂದಿಯನ್ನು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನುಮೋದನೆ ನೀಡಿದ್ದಾರೆ.

ನಿರ್ಲಕ್ಷಿತ ಸಮುದಾಯವನ್ನು ಗುರುತಿಸಿ ಸಾಮಾಜಿಕ ನ್ಯಾಯ ಸಮಿತಿಗೆ ನನ್ನನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ಸಂತೋಷ ತಂದಿದೆ. ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಡಾ.ಸಿಎಸ್. ದ್ವಾರಕನಾಥ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ನಾಗಣ್ಣ ಹೇಳಿದ್ದಾರೆ.
ದಿ ನ್ಯೂಸ್ ಕಿಟ್.ಇನ್ ಜೊತೆ ಮಾತನಾಡಿದ ಜಿ.ಕೆ.ನಾಗಣ್ಣ, ಸಾಮಾಜಿಕ ನ್ಯಾಯ ಸಿದ್ದಾಂತ ಇಟ್ಟುಕೊಂಡು ಹೋರಾಟ ಮಾಡುತ್ತಿರುವ ನನ್ನಂಥವರನ್ನು ಗುರುತಿಸಿರುವುದು ಸಂತಸ ತಂದಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಸಹೋದರತೆಯ ಆಧಾರದ ಮೇಲೆ ಹೋರಾಟ ಮಾಡಿಕೊಂಡು ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ.


