ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿಯಲ್ಲಿ ಹಂಚಿಹೋಗಿರುವ ಕಾಂಗ್ರೆಸ್ ಮತದಾರರನ್ನು ವಾಪಸ್ ಕರೆತಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರು ಸ್ಥಾಪಿಸಬೇಕು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಮನವಿ ಮಾಡಿದರು.
ತುಮಕೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು 20 ವರ್ಷದ ನಂತರ ಈ ಬಾರಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಲು ಶ್ರಮಿಸಬೇಕು. ಮನೆಮನೆಗೂ ಪಕ್ಷದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಗೃಹ ಲಕ್ಷ್ಮಿ ಕಾರ್ಡ್ ವಿತರಣೆ ಮಾಡಿ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.
ಭ್ರಷ್ಟ ಬಿಜೆಪಿ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ, ಜೆಡಿಎಸ್ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಜನಪರ ಆಡಳಿತ ನೀಡುವ ಕಾಂಗ್ರೆಸ್ ಸರ್ಕಾರವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಈ ಸ್ಥಿತಿಯಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಮನೆಮನೆಗೆ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಹೃಚ್. ನಿಂಗಪ್ಪ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ಹಾಲಿ, ಮಾಜಿ ಶಾಸಕರ ಆರ್ಭಟಗಳಿಗೆ ಜನ ಬೇಸತ್ತಿದ್ದಾರೆ. ಸಜ್ಜನ ನಾಯಕರನ್ನು ಬಯಸುತ್ತಿದ್ದಾರೆ ಎಂದರು.
ಯುವ ಮುಖಂಡ ಶ್ರೀನಿವಾಸ್ ಮಾತನಾಡಿ, ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದ್ದೇನೆ. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ. ಮನೆಮನೆಗಳಲ್ಲಿ ಪಕ್ಷದ ಕಾರ್ಯಕ್ರಮ ಪ್ರಚಾರ ಮಾಡುತ್ತಾ ಚುನಾವಣೆಗೆ ಸಿದ್ಧವಾಗಿದ್ದೇನೆ. ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದರು.
ಕ್ಷೇತ್ರ ಉಸ್ತುವಾರಿ ಕೆಂಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ರಮೇಶ್, ಒ. ಸಿ. ಕೃಷ್ಣಪ್ಪ, ಭಾಗ್ಯಮ್ಮ, ರತ್ನಮ್ಮ, ಸುಶೀಲಮ್ಮ ಇತರರು ಇದ್ದರು.