Thursday, December 26, 2024
Google search engine
Homeಮುಖಪುಟತುಮಕೂರು ಜಿಲ್ಲೆಗೆ ಬಂತು ಸಿಪಿಐನ ಸೂರಿಗಾಗಿ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾ

ತುಮಕೂರು ಜಿಲ್ಲೆಗೆ ಬಂತು ಸಿಪಿಐನ ಸೂರಿಗಾಗಿ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾ

ರಾಜ್ಯದ ವಸತಿಹೀನರು ಮತ್ತು ನಿವೇಶನ ರಹಿತರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಕೈಗೊಂಡಿರುವ ಸೂರಿಗಾಗಿ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾ ತುಮಕೂರು ಜಿಲ್ಲೆಗೆ ಅಗಮಿಸಿದೆ. ಬಿರುಬಿಸಿಲನ್ನು ಲೆಕ್ಕಿಸಿದೆ ಸಿಪಿಐ ನಾಯಕ ಸಾತಿ ಸುಂದರೇಶ್ ನೇತೃತ್ವದಲ್ಲಿ ಸೂರಿಗಾಗಿ ಕೋಟಿ ಹೆಜ್ಜೆ ಜಾಥಾ ನಡೆಯುತ್ತಿದ್ದು, ಬಿಪಿಎಲ್ ನಿವೇಶನರಹಿತರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಲಾಗಿದೆ.

ಜಾಥಾದ ನೇತೃತ್ವ ವಹಿಸಿರುವ ಸಾತಿ ಸುಂದರೇಶ್ ಅವರನ್ನು ದಿ ನ್ಯೂಸ್ ಕಿಟ್.ಇನ್ ಮಾತನಾಡಿಸಿತು. ರಾಜ್ಯದಲ್ಲಿರುವ ವಸತಿ ರಹಿತ ಕುಟುಂಬಗಳ ಸಂಕಟಪಡುತ್ತಿರುವ ಮಾಹಿತಿ ಹಂಚಿಕೊಂಡರು. ರಾಜ್ಯದಲ್ಲಿ 50 ಲಕ್ಷ ಕುಟುಂಬಗಳಿಗೆ ಸೂರು ಇಲ್ಲ. ಪ್ರತಿಯೊಂದು ಕುಟುಂಬದಲ್ಲಿ ನಾಲ್ಕು ಜನರಂತೆ ಎಣಿಕೆ ಮಾಡಿದರೆ ಸುಮಾರು 2 ಕೋಟಿ ಜನರಿಗೆ ವಸತಿ ಮತ್ತು ನಿವೇಶನಗಳಿಲ್ಲದೆ ಇರುವುದು ಕಂಡು ಬಂದಿದೆ. ಆದರೆ ಸರ್ಕಾರ ವಸತಿ ರಹಿತರಿಗೆ ಮತ್ತು ಮನೆ ಇಲ್ಲದವರಿಗೆ ವಸತಿ ನೀಡುವ ಮತ್ತು ನಿವೇಶನ ನೀಡುವ ಕೆಲಸವನ್ನು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲ ಹಂತದಲ್ಲಿ ಬಳ್ಳಾರಿಯಿಂದ ಆರಂಭಗೊಂಡ ಸೂರಿಗಾಗಿ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ತಾಳಗುಂದದಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಎರಡನೇ ಹಂತದ ಜಾಥಾವನ್ನು ಹಿಂದೆ ಸ್ಥಗಿತಗೊಳಿಸಿದ್ದ ಸ್ಥಳದಿಂದಲೇ ಜಾಥಾ ಆರಂಭಿ ಸಿದ್ದು ಇಂದು ಜಾಥಾ ಕೊರಟಗೆರೆ ಬಂದು ತಲುಪಿದೆ. ಮಾರ್ಚ್ 3ಕ್ಕೆ ತುಮಕೂರು ನಗರಕ್ಕೆ ಆಗಮಿಸಲಿರುವ ಜಾಥಾ ಟೌನ್ ಹಾಲ್ ನಲ್ಲಿ ಒಂದು ಬಹಿರಂಗ ಸಮಾವೇಶ ನಡೆಸಿ ಪ್ರತಿಭಟನೆ ನಡೆಸಲಿದೆ.

ರಾಜ್ಯ ಸಿಪಿಐ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಈ ಜಾಥಾದ ನೇತೃತ್ವವನ್ನು ವಹಿಸಿದ್ದು ಸಾಮಾನ್ಯ ಕಾರ್ಯಕರ್ತರೊಂದಿಗೆ ಬೆರೆತು ಬಿರು ಬಿಸಿಲಿನಲ್ಲೂ ಜಾಥಾದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಒಂದು ದಿನಕ್ಕೆ 18 ರಿಂದ 20 ಕಿಲೋ ಮೀಟರ್ ಕಾಲ್ನಡಿಗೆ ಜಾಥಾದಲ್ಲಿ ತೆರಳಲಿದ್ದು ವಸತಿ ರಹಿತರು ಮತ್ತು ನಿವೇಶನರಹಿತರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಭೂಹೀನರು ಮತ್ತು ವಸತಿರಹಿತರು ಹೆಚ್ಚಾಗಿದ್ದು ಸರ್ಕಾರ ಅವರಿಗೆ ವಸತಿ/ನಿವೇಶನ ನೀಡದೆ ಅವರ ಹಕ್ಕನ್ನು ಮೊಟುಕುಗೊಳಿಸುತ್ತಿದೆ. ಇದರಿಂದಾಗಿ ಒಂದು ಮನೆಯಲ್ಲಿ ನಾಲ್ಕು ಕುಟುಂಬಗಳು ವಾಸಿಸುತ್ತಿವೆ. ಇಂಥವರನ್ನು ಗುರುತಿಸಿ ಅವರಿಗೆ ವಸತಿ ನಿರ್ಮಿಸಿಕೊಡಬೇಕಿದೆ ಎಂದು ಸಾತಿ ಸುಂದರೇಶ್ ದಿ ನ್ಯೂಸ್ ಕಿಟ್.ಇನ್ ಗೆ ತಿಳಿಸಿದರು.

ರಾಜ್ಯ ಸರ್ಕಾರ 15 ಲಕ್ಷ ಎಕರೆ ಗೋಮಾಳದ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಲು ಮುಂದಾಗಿದೆ. ಹೀಗೆ ಮಾಡುವುದರಿಂದ ವಸತಿ ಇಲ್ಲದವರು ಮತ್ತು ನಿವೇಶನ ಇಲ್ಲದವರು ಶಾಶ್ವತವಾಗಿ ಮನೆ ಇಲ್ಲದಂತೆ ಇರಬೇಕಾದ ಪರಿಸ್ಥಿತಿ ನಿರ್ಮಾಣ ವಾಗಲಿದೆ. ಬಡವರ ಬದುಕು ಬೀದಿಗೆ ಬೀಳಲಿದೆ. ಇದನ್ನು ತಡೆಯುವ ಉದ್ದೇಶದಿಂದ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದು ಬಡವರಿಗೆ ನಿವೇಶನ/ವಸತಿ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದರು.

ಸೂರಿಗಾಗಿ ಕೋಟಿ ಹೆಜ್ಜೆ ಜಾಥಾದಲ್ಲಿ ಸಿಪಿಐ ಮುಖಂಡ ಗಿರೀಶ್, ರುದ್ರಪ್ಪ, ಯುವ ನಾಯಕ ಸಂತೋಷ್, ವಕೀಲ ರಫೀಕ್ ಮೊದಲಾದವರು ಭಾಗಿಯಾಗಿದ್ದು ಬೆಂಗಳೂರುವರೆಗೆ ಜಾಥಾದಲ್ಲಿ ತೆರಳಲಿದ್ದಾರೆ. ಜಾಥಾ ನಡೆಸುತ್ತಿರುವುದು ಸಿಪಿಐ ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular