Friday, November 22, 2024
Google search engine
Homeಮುಖಪುಟಪಿಂಚಣಿಗಾಗಿ ಮುಷ್ಕರ - ಇಬ್ಬರು ಶಿಕ್ಷಕರ ಆತ್ಮಹತ್ಯೆ - ಶಿಕ್ಷಕರ ಗೋಳು ಕೇಳೋರೇ ಇಲ್ಲ ಎಂದ...

ಪಿಂಚಣಿಗಾಗಿ ಮುಷ್ಕರ – ಇಬ್ಬರು ಶಿಕ್ಷಕರ ಆತ್ಮಹತ್ಯೆ – ಶಿಕ್ಷಕರ ಗೋಳು ಕೇಳೋರೇ ಇಲ್ಲ ಎಂದ ಸಿದ್ದರಾಮಯ್ಯ

ಪಿಂಚಣಿಗಾಗಿ ಮುಷ್ಕರದಲ್ಲಿ ತೊಡಗಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿಯ ಶಿಕ್ಷಕ ಸಿದ್ದಯ್ಯ ಹಿರೇಮಠ ಮತ್ತು ರಾಯಚೂರು ಜಿಲ್ಲೆ ಸಿಂಧನೂರು ಮೂಲದ ಶಂಕರಪ್ಪ ಬೋರಡ್ಡಿ ಅವರು ರಾಜ್ಯ ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದನ್ನು ಸರ್ಕಾರಿ ಕೊಲೆಗಳು ಅನ್ನದೆ ಬೇರೇನು ಹೇಳಬೇಕು? ಎಂದು ಪ್ರಶ್ನಿಸಿದ್ದಾರೆ.

ಕಳೆದ 141 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತರಾಗಿರುವ ಅನುದಾನಿತ ಶಾಲಾ ಶಿಕ್ಷಕರ ಗೋಳು ಕೇಳುವವರಿಲ್ಲ. ಶಿಕ್ಷಕರು ಕೇಳುತ್ತಿರುವುದು ತಮ್ಮ ಹಕ್ಕಿನ ಪಿಂಚಣಿಯನ್ನು ಎಂಬ ಕನಿಷ್ಠ ಜ್ಞಾನವಾದರೂ ಈ ಸರ್ಕಾರಕ್ಕೆ ಬೇಡವೇ? ಎಂದು ಕೇಳಿದ್ದಾರೆ.

ಬೊಮ್ಮಾಯಿ ಅವರು ಕಣ್ಣು ಬಿಟ್ಟು ನೋಡಲು ಇನ್ನೆಷ್ಟು ಹೆಣ ಬೀಳಬೇಕು? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಶಿಕ್ಷಕರು ಪ್ರತಿಭಟನೆ ಆರಂಭಿಸಿ 141 ದಿನಗಳು ಕಳೆದರೂ ಇನ್ನು ಈ ವಿಚಾರ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಇಷ್ಟು ದಿನ ಕೋಮಾದಲ್ಲಿತ್ತು ಎಂಬುದನ್ನು ಸ್ವತಃ ಒಪ್ಪಿಕೊಂಡಿದೆ ಎಂದು ಖಂಡಿಸಿದ್ದಾರೆ.

ಸದಾ ಕಾಲ ಕಿವಿಯಲ್ಲಿ ಕಮಿಷನ್ ಸದ್ದು ಗುಯ್ಗುಡುವಾಗ ಬಡವರ ಕೂಗು ಕೇಳುವುದಾದರೂ ಹೇಗೆ ಮುಖ್ಯಮಂತ್ರಿಗಳೇ? ಕೋಮುಗಲಭೆ ನಡೆದು ಕೊಲೆಯಾದರೆ ಗಂಟೆಯೊಳಗೆ ಹೆಣದ ಸುತ್ತ ನೊಣದಂತೆ ಹೋಗಿ ಕೂರುವ ಬಿಜೆಪಿ ಸರ್ಕಾರಕ್ಕೆ, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೀವಗಳು ಅಮೂಲ್ಯ ಅನ್ನಿಸುವುದಿಲ್ಲವೇ? ಎಂದಿದ್ದಾರೆ.

ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಮುಷ್ಕರದಲ್ಲಿ ತೊಡಗಿರುವ ಅನುದಾನಿತ ಶಾಲಾ ಶಿಕ್ಷಕರನ್ನು ಕರೆದು ಸರ್ಕಾರ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಕೆಲಸ ಮಾಡಬೇಕು ಮತ್ತು ಈಗಾಗಲೇ ಪ್ರಾಣ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular