ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ.
ಹಿರಿಯ ನಿರ್ದೇಶಕ ದೊರೈರಾಜ್ ಅವರೊಂದಿಗೆ ಸೇರಿ ದೊರೈಭಗವಾನ್ ಎಂದು ಪ್ರಸಿದ್ದರಾಗಿದ್ದ ಈ ಜೋಡಿ 55 ಕನ್ನಡ ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ಮಾಡಿರುವ ಅವರು 24 ಕಾದಂಬರಿಗಳನ್ನು ಸಿನಿಮಾಗೆ ಆಳವಡಿಸಿದ್ದಾರೆ.
ಎಸ್.ಕೆ. ಭಗವಾನ್ ಸಿನಿಮಾ ನಿರ್ದೇಶನದಿಂದ ನಿವೃತ್ತಿಯಾಗಿದ್ದ ಅವರು ಆದರ್ಶ ಸಿನಿಮಾ ಇನ್ ಸ್ಟಿಟೂಟ್ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಎಸ್.ಕೆ.ಭಗವಾನ್ ಅವರು 1933 ಜುಲೈ 3ರಂದು ತಮಿಳು ಬ್ರಾಹ್ಮಣ ಅಯ್ಯರ್ ಕುಟುಂಬದಲ್ಲಿ ಜನಿಸಿ ಬೆಂಗಳೂರಿನಲ್ಲಿ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಯುವಕರಾಗಿದ್ದಾಗ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ನಾಟಕಗಳನ್ನು ಮಾಡುತ್ತಿದ್ದರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ಸಿನಿಮಾ ಜೀವನ ಆರಂಭಿಸಿದರು.
1966ರಲ್ಲಿ ಎಂ.ಸಿ.ನರಸಿಂಹಮೂರ್ತಿ ಅವರ ಜೊತೆಗೂಡಿ ಸಂಧ್ಯಾರಾಗ ಸಿನಿಮಾ ನಿರ್ದೇಶಿಸಿದರು. ಬಳಿಕ ದೊರೈ-ಭಗವಾನ್ ಜೊತೆಗೂಡಿ ರಾಜಕುಮಾರ್ ನಾಯಕ ನಟರಾಗಿರುವ ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿ ಕನ್ಯೆ, ಚಂದನದ ಗೊಂಬೆ, ವಸಂತಗೀತ, ಆಪರೇಷನ್ ಡೈಮಂಡ್ ರಾಕೆಟ್, ಹೊಸಬೆಳಕು, ಯಾರಿವನು ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿ ಹೆಸರು ಗಳಿಸಿದ್ದರು.