Friday, November 22, 2024
Google search engine
Homeಮುಖಪುಟಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹ - ಫೆ.20ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ

ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹ – ಫೆ.20ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ

ನಿಶ್ಚಿತ ಪಿಂಚಣಿ ಮತ್ತು ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಅನುದಾನಿತ ಶಾಲಾ, ಕಾಲೇಜು ನೌಕರರಿಗೆ ಜಾರಿಗೊಳಿಸುವಂತೆ ಆಗ್ರಹಿಸಿ ಪಿಂಚಣಿ ವಂಚಿತ ನೌಕರರ ಸಂಘ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಮುಷ್ಕರ ಪೆ.20ಕ್ಕೆ 135 ದಿನ ತಲುಪಲಿದೆ.

ಬಜೆಟ್ ನಲ್ಲಿ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಸೋಮವಾರ ಫೆ.20 ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ನಂತರ ಅಹೋರಾತ್ರಿ ಅಮರಣಾಂತ ಉಪವಾಸ ನಡೆಸಲು ನಿರ್ಧರಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ, ನಮ್ಮ ಹೋರಾಟ, ಮನವಿಗಳಿಗೆ ಸರ್ಕಾರ ಕಿಂಚಿತ್ತೂ ಮನ್ನಣೆ ನೀಡಿಲ್ಲ. ನಮ್ಮ ಯಾವುದೇ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಈ ನಿರ್ಲಕ್ಷ್ಯ ಧೋರಣೆ ವಿರುದ್ಧ ಫೆ.20 ರಂದು ಸಹಸ್ರಾರು ನೌಕರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬಹುದು. ಬಜೆಟ್ ನಲ್ಲಿ ಸೂಕ್ತ ಪರಿಹಾರ ದೊರೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ನಿವೃತ್ತಿಯಾದ ದಿನಾಂಕದಂದು ವೇತನಕ್ಕೆ ಅನುಗುಣವಾಗಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಬರಿಗೈಯಲ್ಲಿ ನಿವೃತ್ತಿ ಹಾಗೂ ನಿಧನ ಹೊಂದಿದ ಕುಟುಂಬಗಳಿಗೆ ಈ ಸೌಲಭ್ಯವನ್ನು ಕೂಡಲೇ ಜಾರಿಗೆ ತರಬೇಕು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯ ಗಳನ್ನು ತಾರತಮ್ಯ ಇಲ್ಲದೇ ಅನುದಾನಿತ ನೌಕರರಿಗೂ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದರು.

ನಮ್ಮ ಪ್ರಾಮಾಣಿಕ ಮತ್ತು ಶಾಂತಿಯುತ ಹೋರಾಟವನ್ನು ಅಂತ:ಕರಣದಿಂದ ಈಡೇರಿಸುವ ನಿಟ್ಟಿನಲ್ಲಿ ಸ್ವಲ್ಪವೂ ಕಾಳಜಿ ತೋರುತ್ತಿಲ್ಲ. ಸರ್ಕಾರದ ಘೋರ ಅನ್ಯಾಯ ಖಂಡಿಸಿ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದೇವೆ. ಅನುದಾನಿತ ಪಿಂಚಣಿ ವಂಚಿತ ನೌಕರರ ನಡೆ ಬೆಂಗಳೂರು ಫ್ರೀಡಂ ಪಾರ್ಕ್ ಕಡೆ ಎಂಬ ಘೋಷ ವಾಕ್ಯದೊಂದಿಗೆ ಹೋರಾಟ ಆರಂಭಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

ಪಿಂಚಣಿ ಸೌಲಭ್ಯ ದೊರೆಯದೇ ಈಗಾಗಲೇ ಸುಮಾರು 3 ಸಾವಿರಕ್ಕೂ ಹೆಚ್ಚು ನೌಕರರು ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ. ಅನೇಕರು ಸೇವೆಯಲ್ಲಿರುವಾಗಲೇ ಮರಣಹೊಂದಿದ್ದು, ಹನ್ನೆರಡು ವರ್ಷಗಳ ಹೋರಾಟಕ್ಕೆ ಯಾವುದೇ ಮನ್ನಣೆ ನೀಡುತ್ತಿಲ್ಲ ಎಂದು ಜಿ. ಹನುಮಂತಪ್ಪ ಅಸಮಧಾನ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular