ವಿಧಾನಸಭಾ ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಂತೆ ನಡೆದುಕೊಳ್ಳದೇ ಒಂದು ಪಕ್ಷದ ವಕ್ತಾರರಂತೆ ವರ್ತಿಸಿದ್ದು, ಕೂಡಲೇ ಅವರು ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಯಿತ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಹಾಸಭಾದ ಪದಾಧಿಕಾರಿಗಳು ಸಭಾಧ್ಯಕ್ಷ ಕಾಗೇರಿ ಅವರು ಅಧಿವೇಶನದ ವೇಳೆ ಭಾಲ್ಕಿಯ ಶಾಸಕ ಈಶ್ವರ ಖಂಡ್ರೆ ಅವರನ್ನು ಉದ್ದೇಶಿಸಿ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಖಂಡಿಸಿದರು.
ವಿನಾಕಾರಣ ಯಾವುದೋ ದುರುದ್ದೇಶ ಇಟ್ಟುಕೊಂಡು ಕಾಗೇರಿ ಅವರು ವರ್ತಿಸಿದ್ದಾರೆ. ಚುನಾವಣೆ ಹತ್ತಿರ ಇರುವ ಈ ಸಂದರ್ಭದಲ್ಲಿ ಒಬ್ಬ ಜನನಾಯಕರಾಗಿರುವ ಖಂಡ್ರೆಗೆ ಅಪಮಾನಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಗೇರಿ ಅವರು ಭಾರತ ಸಂವಿಧಾನ ಮತ್ತು ಅದರ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಬ್ಬ ತತ್ವ, ನಿಷ್ಠೆ, ಬದ್ಧತೆ ಇರುವ ರಾಜಕಾರಣಿಯಾಗಿದ್ದರೆ ಮತ್ತು ಸಭಾಧ್ಯಕ್ಷರ ಸ್ಥಾನದ ಗೌರವ ಉಳಿಯಬೇಕಾದರೆ ಕೂಡಲೇ ಸಭಾಧ್ಯಕ್ಷ ಸ್ಥಾನ ತ್ಯಜಿಸಬೇಕು ಇಲ್ಲವಾದರೆ ರಾಜ್ಯಾದ್ಯಂತ ಮಹಾಸಭಾದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.