Monday, September 16, 2024
Google search engine
Homeಮುಖಪುಟಕೊಳೆತು ದುರ್ನಾತ ಬರುತ್ತಿರುವ ತುಮಕೂರು ಆಮಾನಿಕೆರೆ ನೀರು

ಕೊಳೆತು ದುರ್ನಾತ ಬರುತ್ತಿರುವ ತುಮಕೂರು ಆಮಾನಿಕೆರೆ ನೀರು

ತುಮಕೂರು ಅಮಾನಿಕೆರೆಯ ನೀರು ಮಲೆತುಹೋಗಿ ದುರ್ನಾತ ಬರುತ್ತಿದೆ. ಕೆರೆಯ ಪಕ್ಕದಲ್ಲೇ ಇರುವ ಕನ್ನಡಭವನ ರಸ್ತೆಯಲ್ಲಿ ಓಡಾಡಿದರೆ ಸಾಕು ಕೆರೆಯ ನೀರು ಕೆಟ್ಟ ವಾಸನೆ ಬರುತ್ತಿರುವುದು ಗಮನಕ್ಕೆ ಬರುತ್ತಿದೆ. ಕೆರೆಯ ಪಕ್ಕದಲ್ಲೇ ಇರುವ ಶ್ರೀರಾಮ ನಗರದ ಜನತೆ ಕೊಳೆತು ನಾರುತ್ತಿರುವ ಗಾಳಿಯನ್ನೇ ಉಸಿರಾಡಬೇಕಾಗಿ ಬಂದಿದೆ.

ಮುಂಗಾರಿನಲ್ಲಿ ವ್ಯಾಪಕವಾಗಿ ಮಳೆಸುರಿದ ಕಾರಣದಿಂದ ಹಲವು ವರ್ಷಗಳ ನಂತರ ಅಮಾನಿಕೆರೆ ತುಂಬಿ ಕೋಡಿ ಬಿದ್ದಿತ್ತು. ಇದು ನಗರದ ನಾಗರಿಕರಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಈಗ ಕೆರೆಯಲ್ಲಿನ ನೀರು ಕೊಳೆತುಹೋಗಿ ದುರ್ನಾತ ಬಡಿಯುತ್ತಿದೆ. ಗಬ್ಬದ್ದು ಹೋಗಿರುವ ನೀರಿನ ಕೆಟ್ಟ ವಾಸನೆಯಿಂದ ಕೆರೆಯ ಪಕ್ಕದಲ್ಲಿ ಓಡಾಡುವ ನಾಗರಿಕರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕತೊಡಗಿದ್ದಾರೆ.

ಕೆರೆಯ ಪಾರ್ಕಿನಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವ ಜನತೆ ಕೊಳೆತ ನೀರಿನ ದುರ್ವಾಸನೆಯನ್ನು ಸೇವಿಸಬೇಕಾದ ಪರಿಸ್ಥಿತಿ ಬಂದಿದೆ. ನೀರನ್ನು ಶುಚಿಗೊಳಿಸಿ ಕೆಟ್ಟವಾಸನೆ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರೂ ಕೆರೆಯ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ಜನರ ಮನವಿಗೆ ಕಿವಿಗೊಡುತ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಮಾನಿಕೆರೆ 400ಕ್ಕು ಹೆಚ್ಚು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ನೀರು ಅರ್ಧದಷ್ಟಿದೆ. ಮಳೆಯ ಸಂದರ್ಭದಲ್ಲಿ ನಗರದ ಕೊಳಚೆ ನೀರು ಸಹ ಅಮಾನಿಕೆರೆ ಹರಿದಿತ್ತು. ಮಳೆಗಾಲದಲ್ಲಿ ಬೀಸುತ್ತಿದ್ದ ತಂಗಾಳಿಯಲ್ಲಿ ವಾಯು ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿತ್ತು. ಮಳೆಗಾಲ ಮುಗಿದು ಬೇಸಿಗೆ ಆರಂಭವಾಗಿರುವ ಹೊತ್ತಿನಲ್ಲಿ ನೀರಿನ ಕೆಟ್ಟ ವಾಸನೆ ಜನರನ್ನು ಬೇಸರಗೊಳ್ಳುವಂತೆ ಮಾಡಿದೆ.

ಸಿದ್ದಗಂಗಾ ಬಡಾವಣೆ, ಎಸ್.ಐ.ಟಿ ಮತ್ತು ಸೋಮೇಶ್ವರ ಬಡಾವಣೆಯ ಒಳಚರಂಡಿ ನೀರು ತುಮಕೂರು ಅಮಾನಿಕೆರೆಗೆ ಹರಿದಿದೆ. ಇದು ಕೂಡ ನೀರು ಮಲೆತುಹೋಗಲು ಕಾರಣ ಎಂದು ಹೇಳಲಾಗುತ್ತಿದೆ.

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಅಮಾನಿಕೆರೆಗೆ ಸಿವಿಯೇಜ್ ಸೇರಿಕೊಳ್ಳುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸಿವಿಯೇಜ್ ನೀರು ಬಿಟ್ಟಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ದುರ್ವಾಸನೆ ಬರಲು ಕಾರಣವೇನು? ಪ್ರಶ್ನಿಸುವ ಯತಿರಾಜ್, ಕೆರೆಯಲ್ಲಿ ಜೊಂಡು ಬೆಳೆದಿದೆ ಕಸ ಸೇರಿಕೊಂಡು ಕೆರೆಯ ನೀರು ಮಲೆಯುತ್ತಿದೆ. ಕಸ ಕೊಳೆತು ನೀರು ಕೆಟ್ಟ ವಾಸನೆ ಬರುತ್ತದೆ. ಜೊತೆಗೆ ಕೆರೆಯಿಂದ ಹೊರಗೆ ನೀರು ಹರಿದು ಹೋದರೆ ಕೆರೆ ಆರೋಗ್ಯ ಪೂರ್ಣವಾಗಿ ಇರಲು ಸಾಧ್ಯ. ಕೆರೆಯ ಸಂರಕ್ಷಣೆ ಮಾಡಿದ ಕ್ರಮದಲ್ಲಿ ದೋಷವಿದೆ. ಕೆರೆಗೆ ನೀರು ಬರಬೇಕು. ಅಲ್ಲಿಂದ ಹರಿದು ಹೊರಗೆ ಹೋಗಬೇಕು ಎನ್ನುತ್ತಾರೆ.

ನಗರ ಪ್ರದೇಶದಲ್ಲಿ ಕೆರೆಯ ಅಭಿವೃದ್ಧಿ ಎನ್ನುವುದು ಮಹಾದೋಷ. ಅಚ್ಚುಕಟ್ಟು ಸರಿಹೋಗಬೇಕು. ನೀರನ್ನು ಬಳಕೆ ಮಾಡಿಕೊಳ್ಳಬೇಕು. ನಗರದ ಹಸಿರೀಕರಣಕ್ಕೆ ಕೆರೆಯ ಈ ನೀರನ್ನು ಬಳಸಿಕೊಳ್ಳಲು ಸಾಧ್ಯವಿತ್ತು. ಆದರೆ ಅದನ್ನು ಮಾಡುತ್ತಿಲ್ಲ. ಕೆರೆಯ ಅಂಚಿನಲ್ಲಿ ಗಿಡ ಹಾಕಿಸಿ ಪೋಟೋ ತೆಗೆಸಿಕೊಂಡರು. ಅಷ್ಟು ಬಿಟ್ಟರೆ ಕೆರೆಯ ಅಭಿವೃದ್ಧಿ ಮಾಡದೆ ನಿರ್ಲಕ್ಷಿಸಲಾಗಿದೆ. ಹಳ್ಳಿಯಲ್ಲಿ ಕೆರೆಯ ನೀರಿನ ಬಳಕೆ ಇದೆ. ಕೆರೆಯ ಗೋಡುನ್ನು ಹೊಲಕ್ಕೆ ಹೊಡೆದುಕೊಳ್ಳುತ್ತಿದ್ದರು. ಹಾಗಾಗಿ ಅಲ್ಲಿ ನೀರು ಮಲೆತುಹೋಗುವುದಿಲ್ಲ. ಆದರೆ ಅಮಾನಿಕೆರೆಯಲ್ಲಿ ಕೆರೆಯ ನೀರು ಹರಿದುಹೋಗುವುದಿಲ್ಲ. ಜೊಂಡು ಬೆಳೆದು, ಒಳಚರಂಡಿ ನೀರು ಹರಿಯುವುದರಿಂದ ನೀರು ಕೆಟ್ಟ ವಾಸನೆ ಬರುತ್ತಿದೆ ಎಂದು ಹೇಳಿದರು.

ನಗರ ಪ್ರದೇಶದಲ್ಲಿ ಎಲ್ಲೆಲ್ಲಿ ಜಾಗವಿರುವುದೋ ಅಲ್ಲಿ ಗಿಡಗಳನ್ನು ಬೆಳೆಸಬಹುದಿತ್ತು. ಈ ನೀರನ್ನು ಅವುಗಳಿಗೆ ಬಳಸಿಕೊಳ್ಳಬೇಕಿತ್ತು. ಇದ್ಯಾವುದೂ ಮಾಡದೇ ಇರುವುದು ಕೂಡ ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ. ನೀರು ಕೆಟ್ಟವಾಸನೆ ಬರುತ್ತಿದ್ದರೂ ಪಕ್ಕದಲ್ಲೇ ಇರುವ ಆಡಳಿತ ನೀರನ್ನು ಶುಚಿಗೊಳಿಸುವ ಕೆಲಸ ಮಾಡುತ್ತಿಲ್ಲ. ಇದರ ಬಗ್ಗೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಈಗಲಾದರೂ ಮಲೆತು ಹೋಗಿರುವ ಕೆರೆಯ ನೀರು ಕೆಟ್ಟ ವಾಸನೆ ಬರದಂತೆ ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular