ಬೆಂಗಳೂರಿನ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ವರೆಗಿನ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಮಂದಿಗೆ ಮಾತನಾಡಿದ ಅವರು ನಾಳೆ ಪದ್ಮನಾಭನಗರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪುನೀತ್ ರಾಜ್ ಕುಮಾರ್ ರಸ್ತೆ ನಾಮಕರಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ನಮ್ಮ ಮಧ್ಯೆ ಇಲ್ಲ. ಆದರೆ ಅವರು ನಮ್ಮೆಲ್ಲರೊಳಗೆ ಆಳವಾಗಿ ನೆಲೆಸಿದ್ದಾರೆ. ಪುನೀತ್ ಹೃದಯವಂತ ಮನುಷ್ಯ. ಬಡವರು, ವಿದ್ಯಾರ್ಥಿಗಳು ಮತ್ತು ಅನಾಥಾಶ್ರಮಗಳ ಬಗ್ಗೆ ಅವರಿಗಿದ್ದ ಕಾಳಜಿ ಬಹಳ ವಿಶಾಲವಾದುದು ಎಂದರು.
ಅವರ ನೆನಪು ಮುಂದಿನ ಪೀಳಿಗೆಗೂ ತಲುಪಬೇಕು ಎಂಬ ದೃಷ್ಟಿಯಿಂದ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ಮೆಗಾ ಸಿಟಿ ಮಾಲ್ ಜಂಕ್ಷನ್ ವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗುವುದು. 12 ಕಿಲೋ ಮೀಟರ್ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ಹೆಸರಿಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾಳೆ ಸಂಜೆ ಆರು ಗಂಟೆಗೆ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ರಸ್ತೆ ನಾಮಕರಣ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿಗಳು ರಸ್ತೆ ನಾಮಕರಣ ಉದ್ಘಾಟನೆ ಮಾಡಲಿದ್ದಾರೆ. ರಾಜ್ ಕುಮಾರ್ ಕುಟುಂಬ, ಸಚಿವರು, ಇಡೀ ಚಿತ್ರರಂಗದ ತಾರೆಯರು ಭಾಗಿಯಾಗಲಿದ್ದಾರೆ ಎಂದರು.