ಸೋಮವಾರ ಮುಂಜಾನೆ ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಕಟ್ಟಡಗಳು ಉರುಳಿ ಬಿದ್ದು ಕನಿಷ್ಠ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ನೂರಾರು ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಕರ್ತರು ನಗರಗಳು ಮತ್ತು ಪಟ್ಟಣಗಳಲ್ಲಿ ಅವಶೇಷಗಳ ಕೆಳಗೆ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗಡಿಯ ಎರಡೂ ಬದಿಗಳಲ್ಲಿ ಮುಂಜಾನೆ ಸಂಭವಿಸಿದ ಭೂಕಂಪನದಿಂದಾಗಿ ನಿದ್ರಾವಸ್ಥೆಯಲ್ಲಿದ್ದ ಸಾವಿರಾರು ಮಂದಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಟರ್ಕಿಯ ನಗರ ಅದಾನದಲ್ಲಿ ಒಬ್ಬ ನಿವಾಸಿ ತನ್ನ ಮನೆಯ ಸಮೀಪವಿರುವ ಮೂರು ಕಟ್ಟಡಗಳು ಕುಸಿದಿವೆ ಎಂದು ಹೇಳಿದ್ದಾರೆ. ನನಗೆ ಇನ್ನು ಮುಂದೆ ಶಕ್ತಿ ಇಲ್ಲ. ರಕ್ಷಣಾ ಕಾರ್ಯಕರ್ತರು ಕಟ್ಟಡಗಳ ಅವಶೇಷಗಳ ಕೆಳಗೆ ಸಿಲುಕಿರುವವರನ್ನು ಹೊರ ತರುವ ಕಾರ್ಯ ನಡೆಯುತ್ತಿದೆ.
ಗಡಿಯ ಸಿರಿಯಾದ ಭಾಗದಲ್ಲಿ ದೇಶದ ಸುದೀರ್ಘ ಅಂತರ್ಯುದ್ದದಿಂದ ಸಿರಿಯಾದ ಇತರ ಭಾಗಗಳಿಮದ ಸ್ಥಳಾಂತರಗೊಂಡ ಸುಮಾರು 4 ಮಿಲಿಯನ್ ಜನರೊಂದಿಗೆ ತುಂಬಿರುವ ಪ್ರದೇಶಗಳಲ್ಲಿ ಭೂಕಂಪನದಿಂದ ಸಾವಿರಾರು ಮನೆಗಳು ಧರೆಗೆ ಉರುಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.