ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಅವರು ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಚೆನ್ನೈನಲ್ಲಿ ನೆಲೆಸಿದ್ದ ಅವರಿಗೆ 78 ವರ್ಷ ವಯಸ್ಸಾಗಿತ್ತು.
ಐದು ದಶಕಗಳ ಕಾಲ ಅವರು ವೃತ್ತಿ ಜೀವನ ಕಳೆದಿದ್ದಾರೆ. ಭಾರತದ ವಿವಿಧ ಭಾಷೆಗಳಲ್ಲಿ ಸುಮಾರು 10 ಸಾವಿರ ಹಾಡುಗಳನ್ನು ಹಾಡಿ ದಾಖಲೆ ಬರೆದಿದ್ದಾರೆ.
ವೆಲ್ಲೂರಿನವರಾದ ವಾಣಿ ಜಯರಾಮ್, ತಮಿಳು, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಹರ್ಯಾನ್ವಿ, ಅಸ್ಸಾಮಿ, ತುಳು ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ.
ಪೌರಾಣಿಕ ಕಾಯಕ ಸಾವಿರಾರು ಭಕ್ತಿಗೀತೆಗಳನ್ನು ರೆಕಾರ್ಡ್ ಮಾಡಿದ್ದಾರೆ. ಪ್ರಪಂಚದಾದ್ಯಂತ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿಗಳನ್ನು ಸಹ ಮಾಡಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ವಾಣಿ ಜಯರಾಮ್ ಹಿಂದಿಯಲ್ಲಿ ಹಿನ್ನೆಲೆ ಗಾಯಕಿಯಾಗಿ 1971ರಲ್ಲಿ ಹೃಷಿಕೇಶ್ ಮುಖರ್ಜಿ ನಿರ್ದೇಶನದ ಗುಡ್ಡಿ ಚಿತ್ರದ ಮೂಲಕ ಹಾಡುಗಾರಿಕೆಗೆ ಪಾದಾರ್ಪಣೆ ಮಾಡಿದರು. 1973ರಲ್ಲಿ ಸ್ವಪ್ನಂ ಚಿತ್ರಕ್ಕಾಗಿ ಪ್ರಸಿದ್ದ ಸಲೀಲ್ ಚೌಧರಿ ಸಂಯೋಜನೆಯ ಸೌರಾಯುಧತಿಲ್ ವಿವರ್ನೋರು ಹಾಡುವ ಮೂಲಕ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅವರು ಪ್ರವೇಶ ಪಡೆದಿದ್ದರು.
ವಾಣಿ ಜಯರಾಮ್ ಅವರು ನವೆಂಬರ್ 30, 1945ರಂದು ವೆಲ್ಲೂರಿನಲ್ಲಿ ಕಲೈವಾಣಿಯಾಗಿ ಜನಿಸಿದರು. ಅವರು ಚೆನ್ನೈನ ಕ್ವೀನ್ ಮೇರಿ ಕಾಲೇಜಿನಲ್ಲಿ ಆದ್ಯಯನ ಮಾಡಿದರು. ಪೂರ್ಣ ಸಮಯದ ಗಾಯಕಿಯಾಗುವ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದರು.