ಬಸವಾದಿ ಶರಣರ ಆದರ್ಶಗಳನ್ನು ನಾವು ನಂಬಿರುವುದರಿಂದ ಇಂದು ಬಸವಕಲ್ಯಾಣದಿಂದಲೇ ನಮ್ಮ ಯಾತ್ರೆಗೆ ಚಾಲನೆ ನೀಡುತ್ತಿದ್ದೇನೆ. ಶರಣರ ಚಳವಳಿಗೆ ಭದ್ರಬುನಾದಿಯಾಗಿ ನಿಂತಿದ್ದು ಅನುಭವ ಮಂಟಪ. ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಕರ್ನಾಟಕದಲ್ಲಿ ಆರಂಭವಾಗಿ, ಇಡೀ ಜಗತ್ತಿಗೆ ಮಾದರಿಯಾಗಿ ನಿಂತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹಿಂದಿನ ನಮ್ಮ ಸರ್ಕಾರದ ಸಾಧನೆಗಳು ಮತ್ತು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಬಸವಾದಿ ಶರಣರು ಜಾತಿವಾದ, ಕೋಮುವಾದಗಳ ವಿರುದ್ಧ ಸಾಮಾಜಿಕ ಚಳವಳಿಯನ್ನು ನಡೆಸಿ, ಸಮಸಮಾಜ ಸ್ಥಾಪನೆಗಾಗಿ ಶ್ರಮಿಸಿದ್ದಾರೆ. ಇಂದು ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿದೆ, ಈ ಸಂಘರ್ಷವನ್ನು ಹುಟ್ಟುಹಾಕಿದವರು ಮನುವಾದಿಗಳು. ಮನುವಾದ ಮತ್ತು ಪುರೋಹಿತಶಾಹಿ ಈ ದೇಶಕ್ಕಂಟಿದ ಶಾಪ ಎಂದು ವಿವೇಕಾನಂದರು ಹೇಳಿದ್ದರು. ಈಗ ವಿವೇಕಾನಂದರನ್ನು ಪೂಜಿಸುವ ಜನ ಅವರ ಮಾತನ್ನು ಮರೆತಿದ್ದಾರೆ ಎಂದು ಟೀಕಿಸಿದರು.
ಬಾಬಾ ಸಾಹೇಬರು ನೀಡಿರುವ ಸಂವಿಧಾನ ರೂಪಿತವಾಗಿರುವುದೇ ಬಸವಾದಿ ಶರಣರ ಆದರ್ಶ ಮತ್ತು ಆಶಯಗಳ ಮೇಲೆ. ಜಾತಿ ರಹಿತವಾದ, ವರ್ಗ ರಹಿತವಾದ ಸಮಸಮಾಜ ನಿರ್ಮಾಣ ಮಾಡಬೇಕು ಎಂದು ಬಸವಣ್ಣ ಹೇಳಿದ್ದರು, ಅದನ್ನೇ ನಮ್ಮ ಸಂವಿಧಾನದ ಪೀಠಿಕೆಯಲ್ಲಿ ನಾವು ಕಾಣಬಹುದು. ಸಂವಿಧಾನದ ಧ್ಯೇಯೋದ್ದೇಶದಲ್ಲಿ ನಂಬಿಕೆ ಇಟ್ಟುಕೊಂಡಿರುವುದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಮನುವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಹೆಡಗೇವಾರ್, ಗೋಲ್ವಾಲ್ಕರ್, ಸಾವರ್ಕರ್ ಇವರೆಲ್ಲರು ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ, ವಿದೇಶದ ಕಾನೂನುಗಳು ಅಂಬೇಡ್ಕರರ ಮೇಲೆ ಪ್ರಭಾವ ಬೀರಿವೆ, ಇದು ಭಾರತದ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿ ವಿರೋಧ ಮಾಡಿದರು ಎಂದು ಆರೋಪಿಸಿದರು.
ಯಾರು ಸಂವಿಧಾನದ ಪರವಾಗಿದ್ದಾರೆ, ಯಾರು ವಿರುದ್ಧವಾಗಿದ್ದಾರೆ ಎಂಬುದನ್ನು ಜನ ತಿಳಿದುಕೊಳ್ಳಬೇಕು. ಆರ್,ಎಸ್,ಎಸ್ ನವರಿಗೆ ಸಮಾನತೆ, ಮನುಷ್ಯತ್ವ, ಸಮಸಮಾಜದಲ್ಲಿ ನಂಬಿಕೆಯಿಲ್ಲ. ಬಸವಣ್ಣನವರು ಮನುವಾದಿ ಚಿಂತನೆಗಳಿಗೆ ವಿರುದ್ಧವಾಗಿ ಸಮಸಮಾಜದ ಕನಸು ಕಂಡವರು. ನಮ್ಮ ಸಂವಿಧಾನ ಹೇಳುವ ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವವರೆಗೆ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಸಂಘಪರಿವಾರದ ಜನ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆ ಕೇಳುವವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಎಂದು ಉತ್ತರಿಸಲಿ. ಹಿಂದೂ ಮಹಾಸಭಾ, ಬಿಜೆಪಿ, ಆರ್,ಎಸ್,ಎಸ್, ಜನಸಂಘ ಈ ಯಾವುದೇ ಸಂಘಟನೆಯ ಒಬ್ಬನೇ ಒಬ್ಬ ವ್ಯಕ್ತಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದಾರ? ಒಬ್ಬರಾದರೂ ದೇಶಕ್ಕಾಗಿ ಹುತಾತ್ಮರಾಗಿದ್ದಾರ? ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ತಮ್ಮ ಆಸ್ತಿ, ಪಾಸ್ತಿ ಕಳೆದುಕೊಂಡು, ಪ್ರಾಣ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್ ನವರು. ಈ ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕಾದ ಅಗತ್ಯ ಇದೆಯಾ? ಎಂದು ಪ್ರಶ್ನಿಸಿದರು.
ಸಾವರ್ಕರ್ ಅವರು ಜೈಲಿನಿಂದ ಬಿಡುಗಡೆಯಾಗಲು 5 ಬಾರಿ ಕ್ಷಮಾಪಣಾ ಪತ್ರ ಬರೆದಿದ್ದರು, ಆ ನಂತರ ಜೈಲಿನಿಂದ ಹೊರಬಂದು ಬ್ರಿಟಿಷರಿಂದ ಪಿಂಚಣಿ ತೆಗೆದುಕೊಳ್ಳುತ್ತಿದ್ದರು, ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರನ್ನು ಪೂಜಿಸುವವರಿಂದ ನಾವು ಪಾಠ ಕಲಿಯಬೇಕ? ಗಾಂಧೀಜಿಯವರ ಹತ್ಯೆಗೆ ಪ್ರಚೋದನೆ ನೀಡಿದ್ದು ಇದೇ ಸಾವರ್ಕರ್. ಗಾಂಧೀಜಿಯವರು ಹಿಂದೂ ಮುಸ್ಲೀಂಮರನ್ನು ಒಂದು ಮಾಡುತ್ತಾರೆ, ಎಲ್ಲರೂ ಒಟ್ಟಾಗಿ ಬಾಳುವಂತೆ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಹತ್ಯೆ ನಡೆಯಿತು. ಗೋಡ್ಸೆ ಮತ್ತು ಸಾವರ್ಕರರ ವಂಶಸ್ಥರೆ ಈ ಬಿಜೆಪಿಯವರು. ಇಂಥವರಿಗೆ ಮತ ನೀಡುತ್ತೀರ? ಇವರು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯನ್ನು ಕೊಂದಿದ್ದಾರೆ. ಇಂಥವರಿಗೆ ಬೆಂಬಲ ನೀಡಬೇಕ? ಎಂದು ಕೇಳಿದರು.


